ಸುಳ್ಯ: ಚಾಲ್ತಿಯಲ್ಲಿರುವ ಕೋವಿ ಪರವಾನಿಗೆಗಳ ನವೀಕರಣ ಅರ್ಜಿಗಳು ಹಾಗೂ ಹೊಸ ಆಯುಧ ಪರವಾನಿಗೆ ಮಂಜೂರಾತಿ ಅರ್ಜಿಗಳನ್ನು ಸಕಾರಣವಿಲ್ಲದೆ ತಿರಸ್ಕೃತಗೊಳಿಸುತ್ತಿದ್ದು ಇದರಿಂದ ಅವಶ್ಯಕ ಪರವಾನಿಗೆದಾರರಿಗೆ ಅನ್ಯಾಯ ಆಗುತಿದೆ, ಈ ಸಮಸ್ಯೆ ಪರಿಹರಿಸಬೇಕು ಎಂದು
ಬಳಕೆದಾರರ ವೇದಿಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬೆಳ್ಳಾರೆ ಬಳಕೆದಾರರ ವೇದಿಕೆ ಸಂಚಾಲಕ ಜಯಪ್ರಸಾದ್ ಜೋಶಿ ನೇತೃತ್ವದಲ್ಲಿ ರೈತರು ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಕೃಷಿ ಮತ್ತು ಆತ್ಮ ರಕ್ಷಣೆಗಾಗಿ ಆಡಳಿತದಿಂದ ಸೂಕ್ತ ಪರವಾನಿಗೆ ಪಡೆದು ಆಯುಧಗಳನ್ನು ಪಡೆಯಲಾಗುತ್ತಿತ್ತು. ಅಲ್ಲದೇ ನವೀಕರಣ ಮತ್ತು ಬಂಧೂಕುಗಳ ವರ್ಗಾವಣೆಯಾಗುತ್ತಿತ್ತು. ಇನ್ನು ಕೆಲವರು ಹೊಸ ಪರವಾನಿಗೆಗೆ ಅರ್ಜಿ ಸಲ್ಲಿಸಿ ಮಂಜೂರಾಗಿ ಆಯುಧಗಳನ್ನು ಹೊಂದುತ್ತಿದ್ದರು. ಇಂತಹ ಸುಗಮವಾದ ವ್ಯವಸ್ಥೆ ಇತ್ತು. ಆದರೆ ಇದೀಗ ಪರವಾನಿಗೆ ಸಮಸ್ಯೆ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ವಿಷಯ ರಾಜ್ಯ ಸರಕಾರದ ವ್ಯಾಪ್ತಿಗೆ ಬರುತ್ತಿದ್ದು, ಜಿಲ್ಲಾಡಳಿತದ ಜೊತೆ ಸಮಸ್ಯೆ ಬಗ್ಗೆ ಚರ್ಚಿಸುವುದಾಗಿ ಸಂಸದರು ತಿಳಿಸಿದರು.
















