ಸುಳ್ಯ:ಜಿಲ್ಲಾ ಲೈಸನ್ಸಿಂಗ್ ಪ್ರಾಧಿಕಾರ ಹಲವು ವರ್ಷಗಳಿಂದ ಚಾಲ್ತಿಯಲ್ಲಿರುವ ಕೋವಿ ಪರವಾನಿಗೆಗಳ ನವೀಕರಣ ಅರ್ಜಿಗಳು ಹಾಗೂ ಹೊಸ ಆಯುಧ ಪರವಾನಿಗೆ ಮಂಜೂರಾತಿ ಅರ್ಜಿಗಳನ್ನು ಕೆಲವು ತಿಂಗಳಿನಿಂದ ಸಕಾರಣವಿಲ್ಲದೆ ತಿರಸ್ಕೃತಗೊಳಿಸುತ್ತಿದ್ದು ಇದರಿಂದ ಅವಶ್ಯಕ ಪರವಾನಿಗೆದಾರರಿಗೆ ಅನ್ಯಾಯ ಆಗುತ್ತಿದ್ದು ಕೂಡಲೇ ಈ ಬಗ್ಗೆ
ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಬಳಕೆದಾರರ ವೇದಿಕೆ ಒತ್ತಾಯಿಸಿದೆ. ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಬೆಳ್ಳಾರೆ ಬಳಕೆದಾರರ ವೇದಿಕೆ ಸಂಚಾಲಕ ಜಯಪ್ರಸಾದ್ ಜೋಶಿ ನಮ್ಮ ಜಿಲ್ಲೆಯಲ್ಲಿ ಕೃಷಿ ಮತ್ತು ಆತ್ಮ ರಕ್ಷಣೆಗಾಗಿ ಆಡಳಿತದಿಂದ ಸೂಕ್ತ ಪರವಾನಿಗೆ ಪಡೆದು ಆಯುಧಗಳನ್ನು ಪಡೆಯಲಾಗುತ್ತಿತ್ತು. ಅಲ್ಲದೇ ನವೀಕರಣ ಮತ್ತು ಬಂಧೂಕುಗಳ ವರ್ಗಾವಣೆಯಾಗುತ್ತಿತ್ತು. ಇನ್ನು ಕೆಲವರು ಹೊಸ ಪರವಾನಿಗೆಗೆ ಅರ್ಜಿ ಸಲ್ಲಿಸಿ ಮಂಜೂರಾಗಿ ಆಯುಧಗಳನ್ನು ಹೊಂದುತ್ತಿದ್ದರು. ಆದರೆ ಇತ್ತೀಚೆಗೆ ಅರ್ಜಿಗಳು ತಿರಸ್ಕೃತಗೊಳ್ಳುತಿದೆ.
ಜಿಲ್ಲೆಯ ಬಹುತೇಕ ಜನರು ಕೃಷಿ ಪದ್ಧತಿಯನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದು, ಕೃಷಿ ಭೂಮಿಗೆ ಆನೆ ದಾಳಿ, ಕಾಡುಕೋಣ, ಹಂದಿ, ಮಂಗಗಳ ಹಾವಳಿಯಿಂದ ಕೃಷಿಕರು ನಲುಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಕೃಷಿಕರ ತೋಟಗಳಿಗೆ ಕಾಡುಪ್ರಾಣಿಗಳ ಅವ್ಯಾವತ ದಾಳಿಯಿಂದ, ಕೃಷಿಕರು ಜೀವನ ನಡೆಸುತ್ತಿರುವುದೇ ಹರಸಾಹಸವಾಗಿರುತ್ತದೆ. ಸಾಮಾನ್ಯವಾಗಿ ಕೃಷಿಕ ತನ್ನ ಆಯುಧಗಳಿಂದ ಶಬ್ದ ಮಾಡಿ ಬೆದರಿಸಿ ಕಾಡು ಪ್ರಾಣಿಗಳನ್ನು ಓಡಿಸುವುದು ಪರಿಪಾಠ. ಆದರೆ ಈಗ ಕೃಷಿ ವ್ಯವಸ್ಥೆಯು ಕಾಡು ಪ್ರಾಣಿಗಳ ಪಾಲಾಗುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕೋವಿ ಪರವಾನಿಗೆ ಮೊದಲಿನಂತೆ ಸುಗಮವಾಗಿ ನಡೆಯಬೇಕು, ಸಕಾರಣವಿಲ್ಲದೆ ಅರ್ಜಿ ತಿರಸ್ಕೃತ ಮಾಡಬಾರದು ಎಂದು ಹಕ್ಕೊತ್ತಾಯ ನಡೆಸಲು ಪರವಾನಿಗೆದಾರರೆಲ್ಲರೂ ಏಕ ಮನಸ್ಸಿನಿಂದ ಒಟ್ಟಾಗಬೇಕು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಬೆಳ್ಳಾರೆ ಬಳಕೆದಾರರ ವೇದಿಕೆಯ ನ್ಯಾಯವಾದಿ ದಳ ಸುಬ್ರಾಯ ಭಟ್ , ಈಶ್ವರ ಭಟ್ ಕೈಲಾರು , ಶರತ್ ಕುಮಾರ್ ಶುಂಠಿಪ್ಪಾಡಿ ಉಪಸ್ಥಿತರಿದ್ದರು.













