ಸುಳ್ಯ:ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮೆಸ್ಕಾಂ ಇಲಾಖೆ ಗ್ರಾಹಕರಿಂದ ತಿಂಗಳ ವಿದ್ಯುತ್ ಬಿಲ್ ಗೆ ಅನ್ವಯಿಸುವಂತೆ ಹೆಚ್ಚುವರಿ ಡಿಪಾಸಿಟ್ ಮೊತ್ತ ಸಂದಾಯ ಮಾಡುವಂತೆ
ಬಿಲ್ಗೆ ಸೇರಿಸಿ ಕೊಡುತ್ತಿದ್ದು ಇದರಿಂದ ಗ್ರಾಹಕರಿಗೆ ಸರಿಯಾದ ಮಾಹಿತಿ ಇಲ್ಲದೇ ಗೊಂದಲಕ್ಕೆ ಒಳಗಾಗುತ್ತಿದ್ದಾರೆ ಎಂದು ಗ್ಯಾರಂಟಿ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ ಹೇಳಿದರು. ಸದಸ್ಯ ಈಶ್ವರ್ ಆಳ್ವ ಮಾತನಾಡಿ ಕೊಡಿಯಾಲ ಗ್ರಾಮದಲ್ಲಿ ಹೊಸ ವಿದ್ಯುತ್ ತಂತಿಗಳನ್ನು ಅಳವಡಿಸುವಂತೆ ಸಲಹೆ ನೀಡಿದರು.
ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ ಆಲೆಟ್ಟಿ ಗ್ರಾಮದ ಮಾಣಿಮರ್ದು ಎಂಬಲ್ಲಿ ಅರಣ್ಯ ಪ್ರದೇಶದ ಒಳಗೆ ಇರುವ ಪರಿಶಿಷ್ಟ ಪಂಗಡಗಳ 8 ಮನೆಗಳಿಗೆ ಇದುವರೆಗೆ ವಿದ್ಯುತ್ ಸಂಪರ್ಕವಿಲ್ಲದೆ ಇರುವ ಬಗ್ಗೆ ಜಿಲ್ಲಾ ಗ್ಯಾರಂಟಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಇಲಾಖಾಧಿಕಾರಿಗಳು ಈ ಬಗ್ಗೆ ಕೂಡಲೇ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ಆನ್ ಲೈನ್ ಟಿಕೆಟ್ ಬುಕಿಂಗ್ ಕೇಂದ್ರ ಸ್ಥಗಿತ ವಾಗಿರುವ ಬಗ್ಗೆ ಸದಸ್ಯ ಧನುಷ್ ಕುಕ್ಕೇಟಿ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ತಾಂತ್ರಿಕ ದೋಷ ದಿಂದ ಸ್ಥಗಿತ ವಾಗಿದೆ. ಮತ್ತೆ ಪುನರರಂಭಿಸಲಾಗುವುದು ಎಂದು ಹೇಳಿದರು. ಕಲ್ಮಡ್ಕ ಗ್ರಾಮಕ್ಕೆ ಬೆಳಿಗ್ಗೆ 10.30ಕ್ಕೆ ಸುಳ್ಯದಿಂದ ತೆರಳುವ ಬಸ್ಸು 2 ವರ್ಷದಿಂದ ಸ್ಥಗಿತ ವಾಗಿರುವುದನ್ನು ಮತ್ತೆ ಪ್ರಾರಂಭಿಸುವಂತೆ ಮತ್ತು ಸಂಜೆ ಪುನಃ 4.30ಕ್ಕೆ ಸುಳ್ಯದಿಂದ ಕಲ್ಮಡ್ಕ ಕ್ಕೆ ಬಸ್ಸು ಸಂಚಾರ ಪ್ರಾರಂಭಿಸುವಂತೆ ಸದಸ್ಯ ಭವಾನಿಶಂಕರ್ ಕಲ್ಮಡ್ಕ ಸಲಹೆ ನೀಡಿದರು. ಸದಸ್ಯೆ ಭವಾನಿ ಬೊಮ್ಮಟ್ಟಿ ಸಹ ಇದಕ್ಕೆ ದನಿಗೂಡಿಸಿದರು.
ಅನ್ನ ಭಾಗ್ಯ ಪಡಿತರ ವಿತರಣೆ ಬಗ್ಗೆ ನ್ಯಾಯಬೆಲೆ ಅಂಗಡಿಗಳಲ್ಲಿ ವೇಳಾಪಟ್ಟಿ ಅಳವಡಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸಲಹೆ ನೀಡಲಾಯಿತು.ನ್ಯಾಯ ಬೆಲೆ ಅಂಗಡಿಗಳಿಗೆ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಬೆಳ್ತಿಗೆ ಮತ್ತು ಕುಚ್ಚಲು ಅಕ್ಕಿಯನ್ನು ಸರಬರಾಜು ಮಾಡುತ್ತಿರುವುದಾಗಿ ಆಹಾರ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಗ್ರಹಲಕ್ಷ್ಮಿ ಯೋಜನೆಗೆ ಸಂಬಂಧ ಪಟ್ಟಂತೆ ಐ ಟಿ/ ಜಿ ಎಸ್ ಟಿ ಕಾರಣಗಳಿಂದ ರಿಜೆಕ್ಟ್ ಆಗಿರುವ ಅರ್ಜಿಗಳಿಗೆ ಹಿಂಬರಹ ನೀಡುವಂತೆ ಮೇಲಧಿಕಾರಿಗಳು ಸುತ್ತೋಲೆ ಕಳುಹಿಸಿರುವ ಬಗ್ಗೆ ಸಿಡಿಪಿಓ ಸಭೆಗೆ ತಿಳಿಸಿದರು. ಐ ಟಿ / ಜಿ ಎಸ್ ಟಿ ಸಮಸ್ಯೆ ಎದುರಿಸುತ್ತಿರುವ ಪಲಾನುಭವಿಗಳು ಹೆಚ್ಚಿನವರು ಬಡ ಕುಟುಂಬ ದವರು ಆದುದರಿಂದ ಇದರ ಬಗ್ಗೆ ಮರು ಪರಿಶೀಲನೆ ಮಾಡುವಂತೆ ಸಭೆಯ ನಡಾವಳಿ ಕಳುಹಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಯುವನಿಧಿ ಯೋಜನೆಯ ಪೋಸ್ಟರ್ ನ್ನು ಅನಾವರಣ ಮಾಡಲಾಯಿತು.
ಸಭೆಯಲ್ಲಿ ಸಮಿತಿ ಸದಸ್ಯರಾದ ಮಣಿಕಂಠ ಕೊಳಗೆ, ರಾಜು ನೆಲ್ಲಿಕುಮೇರಿ, ಸೋಮಶೇಖರ್ ಕೇವಳ,ವಿಜೇಶ್ ಹಿರಿಯಡ್ಕ, ರವಿ ಗುಂಡಡ್ಕ, ಶಿಲ್ಪಾ ಇಬ್ರಾಹಿಂ, ಶ್ರೀಮತಿ ಕಾಂತಿ ಬಿ ಎಸ್, ಶೇಖರ್ ಮನಿಯಾಣಿ ಮಂಡೆಕೋಲು ಉಪಸ್ಥಿತರಿದ್ದರು.












