ಸುಳ್ಯ:ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಆಯಾಯ ಇಲಾಖೆಗಳು ಯಶೋಗಾಥೆಗಳನ್ನು ತಯಾರಿಸಬೇಕು ಎಂದು ಸುಳ್ಯ ತಾ.ಪಂ. ಇ.ಒ ರಾಜಣ್ಣ ಸೂಚನೆ ನೀಡಿದ್ದಾರೆ.ಅವರು ಸುಳ್ಯ ತಾಲೂಕು ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸರಕಾರದ ಯೋಜನೆಗಳನ್ನು ತಾಲೂಕಿನ
ಪ್ರತಿಯೊಬ್ಬ ಫಲಾನುಭವಿಗಳಿಗೆ ಸಿಗಬೇಕು. ಇದಕ್ಕಾಗಿ ಅವರಿಗೆ ಮಾಹಿತಿ ನೀಡುವ ಕೆಲಸ ಆಗಬೇಕು. ಇದಕ್ಕಾಗಿ ಪಂಚ ಗ್ಯಾರಂಟಿಗಳಿಗೆ ಸಂಬಂಧಪಟ್ಟು ಇಲಾಖೆಗಳು ಯಶೋಗಾಥೆಯನ್ನು ತಯಾರಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ಮಾತನಾಡಿ ಗೃಹಲಕ್ಷ್ಮಿ ಯೋಜನೆಯಲ್ಲಿ ತಾಲೂಕಿನಲ್ಲಿ ಸಿಗದೆ ಬಾಕಿ ಆಗಿರುವ ಫಲಾನುಭವಿಗಳಿಗೆ ದೊರಕಿಸಲು ಏನು ಕ್ರಮಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಡಿಪಿಒ ಇಲಾಖೆಯ ಸಿಬ್ಬಂದಿ ಗೃಹಲಕ್ಷ್ಮಿ ಯೋಜನೆಯಡಿ ನವೆಂಬರ್ ಅಂತ್ಯಕ್ಕೆ ೨೬೪೦೪ ಅರ್ಹ ಫಲಾನುಭವಿಗಳು ನೋಂದಾವಣೆ ಮಾಡಿ ಶೇ ೯೫.೧೮ ಪ್ರಗತಿಯಾಗಿದೆ. ನವೆಂಬರ್ ತಿಂಗಳಲ್ಲಿ ೧೧ ಹೊಸ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಆಧಾರ್ ಲಿಂಕ್ ಆಗದೇ ಇರುವ ಫಲಾನುಭವಿಗಳಲ್ಲಿ ೩೮ ಮಂದಿಗೆ ಆಧಾರ್ ಲಿಂಕ್ ಆಗಿದೆ. ಇದರಲ್ಲಿ ೨೨ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ.
ಅನ್ನಭಾಗ್ಯ ಯೋಜನೆಯಲ್ಲಿ ವಿತರಿಸುತ್ತಿರುವ ಅಕ್ಕಿಯನ್ನು ಫಲಾನುಭವಿಗಳು ಅಂಗಡಿಗಳಿಗೆ ಮಾರಾಟ ಮಾಡುವ ವಿಚಾರದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂದು ಆಹಾರ ನಿರೀಕ್ಷಕರು ಮಾಹಿತಿ ನೀಡಿದರು. ತಾಲೂಕಿನಲ್ಲಿ ೧೬೪ ಬಿಪಿಎಲ್ ಕಾರ್ಡ್ ರದ್ದುಗೊಂಡಿದೆ. ನಕಲಿ ಪಡಿತರ ಚೀಟಿದಾರರ ಪತ್ತೆಗೆ ೭೭೬ ಕುಟುಂಬಗಳ ವಿವರ ಕೇಳಿ ನೋಟಿಸ್ ನೀಡಲಾಗಿದೆ. ಇವುಗಳ ಪೈಕಿ ಸುಮಾರು ೬೪೭ ಪಡಿತರ ಚೀಟಿಗಳ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು.ಸರಕಾರದಿಂದ ಪಡಿತರ ಕಿಟ್ಗಳ ವಿತರಣೆ ಮುಂದಿನ ದಿನಗಳಲ್ಲಿ ನಡೆಯಲಿದೆ. ಈ ಕಿಟ್ಗಳ ಬರುವ ಮೊದಲು ಆಯಾಯ ಭಾಗದ ಸದಸ್ಯರ ಗಮನಕ್ಕೆ ತಂದು ಕಿಟ್ ವಿತರಣೆ ಕಾರ್ಯಕ್ರಮ ಮಾಡುವ ಉದ್ದೇಶವಿದೆ. ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕು ಎಂದು ಇ.ಒ ರಾಜಣ್ಣ ಸೂಚನೆ ನೀಡಿದರು.
ಬೆಳ್ಳಾರೆಯಿಂದ ಸುಳ್ಯಕ್ಕೆ ಬರುವ ೩೩ಕೆವಿ ವಿದ್ಯುತ್ ಲೈನ್ ಯಾವ ಹಂತದಲ್ಲಿದೆ ಎಂದು ತಾ.ಪಂ. ಇ.ಒ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಬೆಳ್ಳಾರೆಯಿಂದ ೩೩ಕೆವಿ ವಿದ್ಯುತ್ ಲೈನ್ ಸಂಪರ್ಕ ಪೈಚಾರ್ವರೆಗೆ ಆಗಿದೆ. ಪೈಚಾರಿನಿಂದ ಸುಳ್ಯದವರೆಗೆ ಕಾಮಗಾರಿ ನಡೆಯಬೇಕಿದೆ ಎಂದರು.ಶಕ್ತಿ ಯೋಜನೆಯಲ್ಲಿ ಕೆಲವು ಕಡೆ ಹೊಸ ರೂಟ್ಗಳು ಆಗಿದೆ. ಕಲ್ಮಕಾರ್, ಮಡಪ್ಪಾಡಿ, ಪೇರಾಲು, ಕಂದ್ರಪ್ಪಾಡಿ ಮೊದಲಾದ ಕಡೆ ಬಸ್ ಸಂಪರ್ಕ ಆಗಿದೆ. ತೊಡಿಕಾನದ ಬಸ್ ರೂಟ್ಗೆ ಪ್ರಸ್ತಾವನೆ ಕಳಿಸಲಾಗಿದೆ. ಆರ್ಟಿಒ ಕಡೆಯಿಂದ ಪರವಾನಿಗೆ ಬಾಕಿ ಇದೆ ಕೆಎಸ್ಆರ್ಟಿಸಿಯ ಸಿಬ್ಬಂದಿ ಹೇಳಿದರು.
ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು, ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.












