ಸುಳ್ಯ:ಎರಡು ವರ್ಷದಲ್ಲಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸುಳ್ಯ ತಾಲೂಕಿಗೆ 240 ಕೋಟಿಗೂ ಅಧಿಕ ಅನುದಾನ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ತಿಳಿಸಿದ್ದಾರೆ. ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಡಿ.23ರಂದು ಎರಡು ವರುಷಗಳ ಗ್ಯಾರಂಟಿ ಸಾಧನೆಗಳ ಬಗ್ಗೆ
ತಿಳಿಸಲು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಮಾವೇಶ ಡಿ.23ರಂದು ಮಂಗಳೂರು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಸುಳ್ಯ ತಾಲೂಕಿಗೆ ಗ್ಯಾರಂಟಿಯಲ್ಲಿ ಗೃಹ ಲಕ್ಷ್ಮಿ ಯೋಜನೆಯಲ್ಲಿ ತಾಲೂಕಿಗೆ 23 ಕಂತುಗಳು ಪಾವತಿಯಾಗಿದ್ದು 20,302 ಮಂದಿಗೆ 116.38 ಕೋಟಿ ಪಾವತಿಯಾಗಿದೆ ಅಲ್ಲದೇ ಅನ್ನಭಾಗ್ಯ ಯೋಜನೆಯಲ್ಲಿ 18,177 ಫಲಾನುಭವಿಗಳಿಗೆ 20.10 ಕೋಟಿ ರೂಗಳ 35,55,115 ಕ್ವಿಂಟಾಲ್ ಅಕ್ಕಿ ನೀಡಲಾಗಿದ್ದು ಜೊತೆಗೆ ಗೃಹ ಜ್ಯೋತಿ ಮೂಲಕ ಸುಳ್ಯ ಉಪವಿಭಾಗಕ್ಕೆ 24,270 ಫಲಾನುಭವಿಗಳಿಗೆ 46.90 ಕೋಟಿ ವ್ಯಯಿಸಲಾಗಿದೆ, ಸುಬ್ರಹ್ಮಣ್ಯ ವ್ಯಾಪ್ತಿಯ 9,871 ಫಲಾನುಭವಿಗಳಿಗೆ 11.15 ಕೋಟಿ ಬಳಕೆಯಾಗಿದೆ. ಅಲ್ಲದೇ ಶಕ್ತಿ ಯೋಜನೆ ಮೂಲಕ 1.62 ಕೋಟಿ ಪ್ರಯಾಣಿಕರ 44.93 ಕೋಟಿ ರೂಪಾಯಿಗಳು ಬಳಕೆಯಾಗಿದ್ದು ಯುವ ನಿಧಿ ಮೂಲಕ 410 ಮಂದಿಗೆ 99.96 ಲಕ್ಷ ಪಾವತಿಸಲಾಗಿದೆ.
ಎಂದು ತಿಳಿಸಿದರು.

ಜಿಲ್ಲಾ ಸಮಾವೇಶದಲ್ಲಿ ರಾಜ್ಯ ಆರೋಗ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್,ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ , ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ದ.ಕ.ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಸಚಿವರುಗಳು, ಶಾಸಕರುಗಳು ಭಾಗವಹಿಸಲಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಫಲಾನುಭವಿಗಳು ಭಾಗವಹಿಸಲಿದ್ದಾರೆ ಎಂದು ವಿವಿರಿಸಿದರು.
ಗ್ಯಾರಂಟಿ ಸಮಿತಿ ಸದಸ್ಯ ಕಾರ್ಯದರ್ಶಿ, ತಾ.ಪಂ. ಇಒ ರಾಜಣ್ಣ ಮಾತನಾಡಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಪ್ರತಿ ತಿಂಗಳು ನಡೆದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತದೆ.ಸುಳ್ಯದಿಂದ ಫಲಾನುಭವಿಗಳು ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಇದಕ್ಕೆ ಬೇಕಾಗುವ ಎಲ್ಲಾ ಪೂರ್ವ ಸಿದ್ದತೆಗಳ ಕುರಿತಾಗಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಭವಾನಿಶಂಕರ ಕಲ್ಮಡ್ಕ, ವಿಜೇಶ್ ಹಿರಿಯಡ್ಕ, ಭವಾನಿ ಬೊಮ್ಮೆಟ್ಟಿ, ಧನುಷ್ ಕುಕ್ಕೇಟಿ,ಸೋಮಶೇಖರ ಕೇವಳ,ಈಶ್ವರ ಆಳ್ವ ,ಎ.ವಿ ಅಬ್ಬಾಸ್, ಲತೀಫ್ ಅಡ್ಕಾರ್ , ರಾಜು ನೆಲ್ಲಿಕುಮೇರಿ, ಉಪಸ್ಥಿತರಿದ್ದರು.













