ಸುಳ್ಯ:ಸುಳ್ಯದಲ್ಲಿ ನಡೆದ ರಾಜ್ಯ ಸರಕಾರ ಅನುಷ್ಠಾನ ಮಾಡುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸುಳ್ಯ ತಾಲೂಕು ಮಟ್ಟದ ಗ್ಯಾರಂಟಿ ಸಮಾವೇಶದಲ್ಲಿ ಸುಳ್ಯ ಶಾಸಕರು ಸೇರಿ ವಿಪಕ್ಷ ಜನಪ್ರತಿನಿಧಿಗಳು ಗೈರು ಹಾಜರಾಗಿದ್ದಾರೆ. ಸಮಾರಂಭದ ಅಧ್ಯಕ್ಚತೆ ವಹಿಸಬೇಕಾಗಿದ್ದ ಶಾಸಕಿ ಭಾಗೀರಥಿ ಮುರುಳ್ಯ, ಅತಿಥಿಗಳಾಗಿದ್ದ
ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಎಸ್.ಎಲ್.ಭೋಜೇ ಗೌಡ, ಪ್ರತಾಪಸಿಂಹ ನಾಯಕ್ ಗೈರು ಹಾಜರಾಗಿದ್ದರು.
ಮುಜುಗರದಿಂದ ಬಿಜೆಪಿ ಶಾಸಕರು ಗೈರು- ದಿನೇಶ್ ಗುಂಡೂರಾವ್:
ಶಾಸಕರು ಹಾಗೂ ವಿಪಕ್ಷ ಜನಪ್ರತಿನಿಧಿಗಳು ಭಾಗವಹಿಸದ ಬಗ್ಗೆ ಸಭೆಯಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್
‘ಮುಜುಗರದಿಂದ ಬಿಜೆಪಿ ಶಾಸಕರು ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಟೀಕೆ ಮಾಡಿದ ಬಿಜೆಪಿಗೆ ಈಗ ಗ್ಯಾರಂಟಿ ಅನುಷ್ಠಾನ ಆದ ಮೇಲೆ ಟೀಕೆ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಶಾಸಕರು ಸಮಾವೇಶಕ್ಕೆ ಬರುತ್ತಿಲ್ಲ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳಲ್ಲಿ ಎಲ್ಲರೂ ಫಲಾನಿಭವಿಗಳು. ಈ ಯೋಜನೆಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ.ಇನ್ನಷ್ಟು ಬಲಿಷ್ಠವಾಗಿ ಮುಂದುವರಿಸುತ್ತೇವೆ. ಗ್ಯಾರಂಟಿ ಯೋಜನೆಗಳು ಬಿಜೆಪಿ ಕಾರ್ಯಕರ್ತರಿಗೆ ಬೇಡ ಎಂದು ಹೇಳುವ ಧೈರ್ಯ ಬಿಜೆಪಿಗೆ ಇದೆಯೇ ಎಂದು ಸಚಿವರು ಪ್ರಶ್ನಿಸಿದರು.









