ಶ್ರೀಹರಿಕೋಟ: ನ್ಯಾವಿಗೇಷನ್ (ಪಥದರ್ಶಕ) ಉಪಗ್ರಹ ‘ಎನ್ವಿಎಸ್–01’ ಅನ್ನು ಹೊತ್ತ ಜಿಎಸ್ಎಲ್ವಿ ರಾಕೆಟ್ ಸೋಮವಾರ ಬೆಳಿಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿತು.GSLV-F12 ಮತ್ತು NVS-01 ಉಡಾವಣೆಗೊಂಡ ಸುಮಾರು 19 ನಿಮಿಷಗಳಲ್ಲಿ 251 ಕಿಮೀ ಎತ್ತರದ ಜಿಯೋಸಿಂಕ್ರೊನಸ್ ವರ್ಗಾವಣೆ
ಕಕ್ಷೆಯಲ್ಲಿ ಉಪಗ್ರಹ ಯಶಸ್ವಿಯಾಗಿ ಸೇರಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
ರಾಕೆಟ್ 51.7 ಮೀಟರ್ ಉದ್ದ ಮತ್ತು 420 ಟನ್ ತೂಕವಿರುತ್ತದೆ ಎಂದು ಇಸ್ರೋ ತಿಳಿಸಿದೆ. ಈ ಉಪಗ್ರಹವು 12 ವರ್ಷಗಳ ಕಾಲ ಸೇವೆ ಸಲ್ಲಿಸುತ್ತದೆ. NVS-01 ದೇಶದ ಎರಡನೇ ತಲೆಮಾರಿನ ನ್ಯಾವಿಗೇಷನ್ ಉಪಗ್ರಹಗಳಲ್ಲಿ ಮೊದಲನೆಯದು. ಈ ಉಪಗ್ರಹವು ಭಾರತದ ಭೂಪ್ರದೇಶದ ಸುತ್ತ 1,500 ಕಿಮೀ ವ್ಯಾಪ್ತಿಯಲ್ಲಿ ನೈಜ-ಸಮಯದ ಸ್ಥಾನೀಕರಣ ಸೇವೆಗಳನ್ನು ಒದಗಿಸುತ್ತದೆ. ಸೇವೆಗಳ ನಿರಂತರತೆಯನ್ನು ಖಾತ್ರಿಪಡಿಸುವ ವಿಷಯದಲ್ಲಿ ಎರಡನೇ ತಲೆಮಾರಿನ ಈ ಉಪಗ್ರಹದ ಉಡಾವಣೆಯು ಅತ್ಯಂತ ಮಹತ್ವದ್ದು ಎನಿಸಿಕೊಂಡಿದೆ. ದೇಶದಲ್ಲಿ ನಿಖರವಾದ ಮತ್ತು ನೈಜ ಪಥದರ್ಶಕ ಮಾಹಿತಿಯನ್ನು ಈ ಉಪಗ್ರಹಗಳು ಒದಗಿಸಲಿದೆ ಎಂದು ಇಸ್ರೊ ಹೇಳಿದೆ.