ಬೆಂಗಳೂರು: ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಯಾದ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2,000 ನೀಡುವ ‘ಗೃಹ ಲಕ್ಷ್ಮೀ’ ಯೋಜನೆಗೆ ಫಲಾನುಭವಿಗಳ ನೋಂದಣಿ ಇದೇ 19ರಿಂದ ಆರಂಭವಾಗಲಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ‘ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು
ಗುರುತಿಸಿದವರು ಯೋಜನೆಯ ಫಲಾನುಭವಿ ಆಗಿರುತ್ತಾರೆ’ ಎಂದರು.‘ಫಲಾನುಭವಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್ಟಿ ಪಾವತಿದಾರರಾಗಿದ್ದರೆ, ಅಂಥವರು ಯೋಜನೆಗೆ ಅರ್ಹರಲ್ಲ. ರೇಷನ್ ಕಾರ್ಡ್ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೆ ಎಸ್ಎಂಎಸ್ ಮೂಲಕ ನೋಂದಣಿ ದಿನ, ಸಮಯ ಮತ್ತು ಸ್ಥಳದ ವಿವರ ತಿಳಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿಗೆ ಅವಕಾಶ ಮಾಡಲಾಗುವುದು, ಅಲ್ಲದೇ ಪ್ರಜಾಪ್ರತಿನಿಧಿ (ಸರ್ಕಾರದಿಂದ ಗುರುತಿಸಿರುವ ಸ್ವಯಂ ಸೇವಕರು) ಮೂಲಕವು ನೋಂದಾಯಿಸಿಕೊಳ್ಳಬಹುದು.
ಯೋಜನೆಗೆ ಚಾಲನೆ ನೀಡಲು ಪಕ್ಷದ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ರಾಷ್ಟ್ರೀಯ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. ಆಗಸ್ಟ್ 16 ಅಥವಾ 17ರಂದು ಯಜಮಾನಿ ಖಾತೆಗೆ ಹಣ ಜಮೆ ಮಾಡಲಾಗುವುದು‘ ಎಂದೂ ಅವರು ವಿವರಿಸಿದರು.