ಪುತ್ತೂರು: ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಆ.11ರ ಶುಕ್ರವಾರ ಪುತ್ತೂರಿನ ಪುರಭವನದಲ್ಲಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಈ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ, ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಬಾಕಿ ಉಳಿದಿರುವ
ಗುರಿಯನ್ನು ಅತೀ ಶೀಘ್ರದಲ್ಲಿ ತಲುಪಲಾಗುವುದು ಎಂದು ಹೇಳಿದರು. ರಾಜೀವ್ಗಾಂಧಿ ಅವರ ಜನ್ಮ ದಿನದಂದು ಗೃಹಲಕ್ಷ್ಮೀ ಯೋಜನೆ ಜಾರಿಗೆ ಬರಲಿದೆ. ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ನೀಡಿರುವ ಇಷ್ಟು ದೊಡ್ಡ ಪ್ರಮಾಣದ ಯೋಜನೆ ಪ್ರತಿಯೊಬ್ಬ ವ್ಯಕ್ತಿಗೂ ಪ್ರಯೋಜನವಾಗಲಿದೆ. ಸರ್ಕಾರ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂ.ಆರ್.ಐ ಹಾಗೂ ಸಿಟಿ ಸ್ಕ್ಯಾನಿಂಗ್ ಅನ್ನು ಉಚಿತವಾಗಿ ಮಾಡುವ ಬಗ್ಗೆಯೂ ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯದಲ್ಲಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ನಿರ್ದೇಶನ ನೀಡಲಾಗಿದೆ. ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳ ಪ್ರವೇಶಕ್ಕೆ ಅವಕಾಶ ನೀಡಬಾರದು ಹಾಗೂ ಜನರು ಯಾವುದೇ ತೊಂದರೆಗೆ ಒಳಗಾಗಬಾರದು ಎಂದರು.
ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್.ಕೆ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪದ್ಮಾವತಿ, ತಾಂತ್ರಿಕ ನಿರ್ದೇಶಕರಾದ ಎಚ್.ಜಿ. ರಮೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಭಾಗವಹಿಸಿದ್ದರು.