ಸುಳ್ಯ: ಆಲೆಟ್ಟಿ ಗ್ರಾ.ಪಂ.ನ ಕಾರ್ಯದರ್ಶಿ ಸೃಜನ್ ಎ.ಜೆ. ಅವರನ್ನು ಬೆಳ್ಳಾರೆ ಗ್ರಾ.ಪಂ.ಗೆ ನಿಯೋಜನೆ ಮಾಡಿರುವುದನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿ ಆಲೆಟ್ಟಿ ಗ್ರಾಮ ಪಂಚಾಯತ್ನ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸುಳ್ಯ ತಾಲೂಕು ಪಂಚಾಯತ್ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ಗ್ರೇಡ್ 1 ಕಾರ್ಯದರ್ಶಿ ಸೃಜನ್ ಅವರನ್ನು ಬೆಳ್ಳಾರೆ
ಗ್ರಾ.ಪಂ.ಗೆ ನಿಯೋಜನೆ ಮಾಡಿ ದ.ಕ.ಜಿಲ್ಲಾ ಪಂಚಾಯತ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶ ಮಾಡಿದ್ದರು. ಸೃಜನ್ ಅವರ ನಿಯೋಜನೆ ತಡೆ ಹಿಡಿದು ಆಲೆಟ್ಟಿ ಪಂಚಾಯತ್ನಲ್ಲಿಯೇ ಮುಂದುವರಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯರಾದ ಸತ್ಯಕುಮಾರ್ ಆಡಿಂಜ, ಧರ್ಮಪಾಲ ಕೊಯಿಂಗಾಜೆ, ಗೀತಾ ಕೋಲ್ಚಾರು, ಚಂದ್ರಕಾಂತ್ ನಾರ್ಕೋಡು, ಮೀನಾಕ್ಷಿ ಕುಡೆಕಲ್ಲು, ಮಾಜಿ ಅಧ್ಯಕ್ಷ ಮುತ್ತಪ್ಪ ಪೂಜಾರಿ ಮತ್ತಿತರರು ಪ್ರತಿಭಟನೆ ನಡೆಸಿದರು.

ಸೃಜನ್ ಅವರು ಗ್ರಾ.ಪಂ,ನಲ್ಲಿ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಇದೀಗ ರಾಜಕೀಯ ಪ್ರೇರಿತವಾಗಿ ವಿನಾಃ ಕಾರಣ ಕಾರ್ಯದರ್ಶಿಯ ಮೇಲೆ ಸಾರ್ವಜನಿಕರ ದೂರು ಬಂದಿದೆ ಎಂದು ಆರೋಪಿಸಿ ಈ ರೀತಿಯ ಕ್ರಮ ಜರುಗಿಸುವುದು ಸರಿಯಲ್ಲ. ಅದ್ದರಿಂದ ಕೂಡಲೇ ಆದೇಶವನ್ನು ಹಿಂತೆಗೆದು ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು. ಬಳಿಕ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಇಒ ಅವರು ತಿಳಿಸಿದರು.