ಜಾಲ್ಸೂರು: ಜಾಲ್ಸೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ತಿರುಮಲೇಶ್ವರಿ ಮರಸಂಕ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ತಿರುಮಲೇಶ್ವರಿ ಅರ್ಭಡ್ಕ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ತಿರುಮಲೇಶ್ವರಿ ಮರಸಂಕ ಅವಿರೋಧವಾಗಿ ಆಯ್ಕೆಯಾದರು.ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
ನಡೆದು ತಿರುಮಲೇಶ್ವರಿ ಅರ್ಭಡ್ಕ ಆಯ್ಕೆಯಾದರು. ಉಪಾಧ್ಯಕ್ಷತೆಗೆ ಬಿಜೆಪಿ ಬೆಂಬಲಿತರಲ್ಲಿ ಮೀಸಲಾತಿಯಲ್ಲಿ ಆಯ್ಕೆಯಾದ ಸದಸ್ಯರಿಲ್ಲದ ಕಾರಣದಿಂದಾಗಿ ಬಿಜೆಪಿ ಬೆಂಬಲಿತರು ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ತಿರುಮಲೇಶ್ವರಿ ಅರ್ಭಡ್ಕ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಗೀತಾ ಗೋಪಿನಾಥ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದಾಗ ಬಿಜೆಪಿ ಬೆಂಬಲಿತ ಹನ್ನೊಂದು ಮಂದಿ ಸದಸ್ಯರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದೆ ತಟಸ್ಥರಾಗಿದ್ದರು.
ಈ ನಡುವೆ ಬಿಜೆಪಿ ಬಂಡಾಯ ಸದಸ್ಯರಾದ ವಿಜಯ ಅಡ್ಕಾರು ಅವರು ಚುನಾವಣಾ ಪ್ರಕ್ರಿಯೆಗೆ ಬಾರದೇ ಇದ್ದುದರಿಂದ ಐದು ಮಂದಿ ಸದಸ್ಯರು ಮಾತ್ರ ಮತ ಚಲಾವಣೆ ಮಾಡಿದ್ದರು. ಫಲಿತಾಂಶ ಘೋಷಣೆಯಾದಾಗ ಕಾಂಗ್ರೆಸ್ ಬೆಂಬಲಿತ ಸದಸ್ಯೆ ತಿರುಮಲೇಶ್ವರಿ ಅರ್ಭಡ್ಕ ಅವರು ನಾಲ್ಕು ಮತ ಪಡೆದು ಆಯ್ಕೆಯಾದರು. ಬಿಜೆಪಿ ಬಂಡಾಯ ಸದಸ್ಯೆ ಗೀತಾ ಗೋಪಿನಾಥ್ ಒಂದು ಮತ ಪಡೆದರು.17 ಮಂದಿ ಸದಸ್ಯ ಬಲದ ಗ್ರಾಮ ಪಂಚಾಯತಿ ಆಡಳಿತದಲ್ಲಿ ಹಿಂದುಳಿದ ವರ್ಗ ಎ ಮಹಿಳಾ ಸ್ಥಾನವು ಅಧ್ಯಕ್ಷತೆಗೆ ಬಿಜೆಪಿ ಬೆಂಬಲಿತ ಸದಸ್ಯೆಯಾಗಿ ತಿರುಮಲೇಶ್ವರಿ ಮರಸಂಕ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸಂಧ್ಯಾ ವಾಗ್ಲೆ ಅವರು ನಾಮಪತ್ರ ಸಲ್ಲಿಸಿದ್ದರು. ಸಂಧ್ಯಾ ವಾಗ್ಲೆ ಅವರು ಅಧ್ಯಕ್ಷತೆಗೆ ಸಲ್ಲಿಸಿದ್ದ ತಮ್ಮ ನಾಮಪತ್ರವನ್ನು ಹಿಂಪಡೆದರು. ಇದರಿಂದ ತಿರುಮಲೇಶ್ವರಿ ಮರಸಂಕ ಆಯ್ಕೆಯಾದರು.