ಬೆಂಗಳೂರು: ವೇತನ ಪರಿಷ್ಕರಣೆ, ಹೊಸ ಪಿಂಚಣಿ ನೀತಿ ರದ್ದತಿ ಬೇಡಿಕೆಗಳ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ತಡ ರಾತ್ರಿ ನಡೆಸಿದ ಸಂಧಾನ ಫಲ ನೀಡಿಲ್ಲ. ಹೀಗಾಗಿ, ಬುಧವಾರದಿಂದ ನೌಕರರು ನಡೆಸುವ ಮುಷ್ಕರ ಆರಂಭಗೊಂಡಿದೆ. ಇದರಿಂದ ರಾಜ್ಯದಾದ್ಯಂತ
ಸರಕಾರಿ ಸೇವೆ ವ್ಯತ್ಯಯವಾಗುವ ಸಾಧ್ಯತೆ ಇದೆ.
ಏಳನೇ ವೇತನ ಆಯೋಗದಿಂದ ತಕ್ಷಣ ಮಧ್ಯಂತರ ವರದಿ ತರಿಸಿಕೊಂಡು ನೌಕರರಿಗೆ ಮಧ್ಯಂತರ ಪರಿಹಾರ ಘೋಷಿಸಲಾಗುವುದು. ಎನ್ಪಿಎಸ್ ರದ್ದತಿ ಹಾಗೂ ಹಳೇ ಪಿಂಚಣಿ ವ್ಯವಸ್ಥೆ ಮರು ಜಾರಿಗೊಳಿಸುವ ಸಂಬಂಧ ಉನ್ನತಾಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಈಗಾಗಲೇ ಎನ್ಪಿಎಸ್ ರದ್ದು ಮಾಡಿರುವ ರಾಜ್ಯಗಳಿಗೆ ಸಮಿತಿ ಭೇಟಿ ನೀಡಿ ತ್ವರಿತವಾಗಿ ವರದಿ ನೀಡಲು ಸೂಚಿಸಲಾಗುವುದು. ನಂತರ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.ಭರವಸೆಗಳ ಕುರಿತು ಸಂಘದ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಪದಾಧಿಕಾರಿಗಳು ತಿಳಿಸಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ನೌಕರರ ಸಂಘದ ಪದಾಧಿಕಾರಿಗಳ ಜತೆ ಮಧ್ಯರಾತ್ರಿವರೆಗೂ ಸಭೆ ನಡೆಸಿದ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಮುಖ್ಯಮಂತ್ರಿ ನೀಡಿದ ಭರವಸೆಗಳ ಕುರಿತ ಸಮಾಲೋಚನೆ ನಡೆಸಿದರು.
ಬಳಿಕ ಪ್ರತಿಕ್ರಿಯಿಸಿದ ಷಡಾಕ್ಷರಿ, ‘ನಾವು ಈಗಾಗಲೇ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಕಾಲ ಮೀರಿದೆ. ವೇತನ ಪರಿಷ್ಕರಣೆ ಮತ್ತು ಎನ್ಪಿಎಸ್ ರದ್ದತಿ ಸಂಬಂಧ ಅಧಿಕೃತ ಆದೇಶ ಹೊರಡಿಸಲೇಬೇಕು. ಬೇರೆ ಯಾವುದಕ್ಕೂ ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಅವರು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆ ಮಂಗಳವಾರ ಬೆಳಿಗ್ಗೆ ನಡೆಸಿದ ಮಾತುಕತೆಯೂ ಫಲ ನೀಡಲಿಲ್ಲ.