ಸುಳ್ಯ:ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ 75 ವರ್ಷಗಳು ಪೂರ್ತಿಯಾಗಿರುವ ಹಿನ್ನಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ 3 ದಿನಗಳ ಅದ್ದೀರಿ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.ಅಮೃತ ಮಹೋತ್ಸವದ ಅಂಗವಾಗಿ 1.25 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು.ಆ.18 ರಂದು ನೂತನ ಅಕ್ಷರ ದಾಸೋಹ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ
ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ
ತಾಲೂಕಿನಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರಕಾರಿ ಸಂಸ್ಥೆ ಎಂದು ಕೀರ್ತಿ ಪಡೆದಿರುವ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು 75 ವರ್ಷಗಳನ್ನು ಪೂರೈಸುತ್ತಿದ್ದು ಇದರ ಅಮೃತ ಮಹೋತ್ಸವ ಕಾರ್ಯಕ್ರಮ 2025ರ ಡಿಸೆಂಬರ್ ನಲ್ಲಿ ನಡೆಯಲಿದೆ. ಅಮೃತ ಮಹೋತ್ಸವದ ನೆನಪಿಗಾಗಿ ಸಂಸ್ಥೆಗೆ ಒಂದು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. 1.25 ಕೋಟಿ ರೂ. ವೆಚ್ಚದಲ್ಲಿ ನೂತನ ಅಕ್ಷರ ದಾಸೋಹ ಕಟ್ಟಡ, ಭೋಜನ ಶಾಲೆ, ಕ್ರೀಡಾಂಗಣಕ್ಕೆ ಗ್ಯಾಲರಿ ಹಾಗು ಸ್ಕ್ಯಾಂಡ್, ಶಾಲಾ ಆವರಣ ತಡೆಗೋಡೆ ಇವುಗಳ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.

ಉಳಿದಂತೆ ಸಂಸ್ಥೆಯ ಮೂಲ ಭೂತ ಸೌಕರ್ಯಗಳ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈ ಗೊಳ್ಳುವ ಬಗ್ಗೆಯೂ ನಿರ್ಧರಿಸಲಾಗಿದೆ. ಇದರೊಂದಿಗೆ ಅಮೃತ ಮಹೋತ್ಸವ ದ ಅಂಗವಾಗಿ ಶೈಕ್ಷಣಿಕ, ಆರೋಗ್ಯ, ಔದ್ಯೋಗಿಕ, ಸಾಹಿತಿ,ಗಣಿತ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳು ನಡೆಯಲಿದೆ. ವಿದ್ಯಾ ಸಂಸ್ಥೆಯಲ್ಲಿ ಇದುವರೆಗೆ 21 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದಾರೆ. ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಹಳೆಯ ವಿದ್ಯಾರ್ಥಿಗಳು ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ಅಮೃತ ಮಹೋತ್ಸವ ಸಮಿತಿ ರಚನೆ:
ಅಮೃತ ಮಹೋತ್ಸವ ಆಚರಣೆಗಾಗಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಕೆ.ಸೀತಾರಾಮ ರೈ ಸವಣೂರು, ಉಪಾಧ್ಯಕ್ಷರಾಗಿ ಡೇವಿಡ್ ಧೀರಾ ಕ್ರಾಸ್ತಾ, ಲಿಂಗಪ್ಪ ಗೌಡ, ಮಂಜುಳಾ ಬಡಿಗೇರ್, ಪಿ.ಬಿ. ಸುಧಾಕರ ರೈ. ಡಾ.ರಂಗಯ್ಯ, ಗಿರೀಶ್ ಡಿ.ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಬಿ.ಸದಾಶಿವ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎಂ.ಮುಸ್ತಾಫಾ, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಮಡಪ್ಪಾಡಿ, ಖಜಾಂಜಿಯಾಗಿ ಅಶೋಕ್ ಪ್ರಭು, ಉಪಖಜಾಂಜಿಯಾಗಿ ರಾಮಚಂದ್ರ ಪಲ್ಲತಡ್ಕ, ಸಂಚಾಲಕರಾಗಿ ಮೋಹನ ಗೌಡ ಬೊಮ್ಮಟ್ಟಿ ಹಾಗು ಪ್ರಕಾಶ ಮೂಡಿತ್ತಾಯ ಇವರನ್ನು ಆಯ್ಕೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಸದಾಶಿವ, ಸಂಘಟನಾ ಕಾರ್ಯದರ್ಶಿ ಕೆ.ಎಂ.ಮುಸ್ತಾಫಾ, ಉಪಾಧ್ಯಕ್ಷೆ ಮಂಜುಳಾ ಬಡಿಗೇರ್, ಸಂಚಾಲಕರಾದ ಮೋಹನ ಗೌಡ ಬೊಮ್ಮಟ್ಟಿ ಹಾಗು ಪ್ರಕಾಶ ಮೂಡಿತ್ತಾಯ ಉಪಸ್ಥಿತರಿದ್ದರು.





