ಸುಳ್ಯ: ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಅ.19ರಂದು ಭಾನುವಾರ ಕಾಲೇಜಿನಲ್ಲಿ ನಡೆಯಲಿದೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏಳು ದಶಕಗಳಲ್ಲಿ ಸುಮಾರು
20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ನಡೆಸಿದ್ದಾರೆ. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸಮಾವೇಶದಲ್ಲಿ ಭಾಗವಹಿಸುವಂತೆ ಪ್ರಯತ್ನ ನಡೆಸಲಾಗುತಿದೆ. ಸಂಸ್ಥೆಯಲ್ಲಿ ಏಳು ದಶಕಗಳ ಕಾಲ ಕಲಿತ ವಿದ್ಯಾರ್ಥಿಗಳ ಮಿಲನ, ವಿದ್ಯಾರ್ಥಿ ದಿನಗಳ ನೆನಪುಗಳ ಮೆಲುಕು, ಸಹಪಾಠಿಗಳ ಕುಶಲೋಪರಿ, ಬೋಧಿಸಿದ ಶಿಕ್ಷಕರ ಜೊತೆ ಸಂವಾದ, ಸಂಸ್ಥೆಯ ಪ್ರಗತಿ ವೀಕ್ಷಣೆ, ಹಿರಿಯ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಸಹಭೋಜನ, ಆಟೋಟಗಳು ನಡೆಯಲಿದೆ. ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿ ಮಾತನಾಡಿ ಡಿ.27ರಿಂದ 29ರ ತನಕ ಮೂರು ದಿನಗಳ ಕಾಲ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2.5 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ, ಅಮೃತ ಮಹೋತ್ಸವ ಸಮಿತಿಯ ಸಂಚಾಲಕ ಕೆ.ಎಂ.ಮುಸ್ತಫ,ಎಸ್ಡಿಎಂಸಿ ಉಪಾಧ್ಯಕ್ಷ ಹಸೈನಾರ್ ಜಯನಗರ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ ಉಪಸ್ಥಿತರಿದ್ದರು.












