ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಕಲಾವಿದ, ಯಕ್ಷಗುರು ಸೂರಿಕುಮೇರು ಗೋವಿಂದ ಭಟ್ (88) ಶುಕ್ರವಾರ ರಾತ್ರಿ ಶಿವಮೊಗ್ಗದ ತೀರ್ಥಹಳ್ಳಿ ಹೆದ್ದೂರಿನಲ್ಲಿ ನಿಧನರಾದರು. ಅವರಿಗೆ ಮೂವರು ಪುತ್ರರು ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕನಿಲದಲ್ಲಿ ಜನಿಸಿದ ಗೋವಿಂದ ಭಟ್ ನಂತರ ಕಲ್ಲಡ್ಕ ಸಮೀಪದ
ಸೂರಿಕುಮೇರುವಿನಲ್ಲಿ ವಾಸವಾಗಿದ್ದರು. ಈಚೆಗೆ ಕೆಲವು ವರ್ಷಗಳಿಂದ ತೀರ್ಥಹಳ್ಳಿಯಲ್ಲಿದ್ದರು.
ಗೋವಿಂದ ಭಟ್ 1951ರಲ್ಲಿ ಮೇಳಕ್ಕೆ ಸೇರಿ ಕುರಿಯ ವಿಠಲ ಶಾಸ್ತ್ರಿ, ಪರಮಶಿವನ್, ಮಾಧವ ಮೆನನ್, ರಾಜನ್ ಅಯ್ಯರ್ ಅವರಲ್ಲಿ ನಾಟ್ಯ ಕಲಿತು ಧರ್ಮಸ್ಥಳ, ಮೂಲ್ಕಿ, ಕೂಡ್ಲು, ಸುರತ್ಕಲ್ ಮತ್ತು ಇರಾ ಸೋಮನಾಥೇಶ್ವರ ಮೇಳಗಳಲ್ಲಿ ತಿರುಗಾಟ ನಡೆಸಿರುತ್ತಾರೆ. ಧರ್ಮಸ್ಥಳ ಮೇಳವೊಂದರಲ್ಲೇ ಸುಮಾರು 55 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.
ಕೌರವ, ರಕ್ತಬೀಜ, ಇಂದ್ರಜಿತು ಮಾಗಧ, ಕರ್ಣ, ಅತಿಕಾಯ ನರಕಾಸುರ, ತಾಂಮ್ರಾಕ್ಷ ಕನಕಕಶಿಪು, ದೇವೇಂದ್ರ ಅರ್ಜುನ ಹನುಮಂತ, ಭೀಷ್ಮ ಬಾಹುಬಲಿ, ವಿಶ್ವಾಮಿತ್ರ ಅವರಿಗೆ ಹೆಸರು ತಂದು ಕೊಟ್ಟ ಪಾತ್ರಗಳು. ನಿರಂತರ 71 ತಿರುಗಾಟಗಳನ್ನು ಮಾಡಿದ್ದ ಅವರು ಬಾಲವೇಷದಿಂದ ಹಿಡಿದು ಸ್ತ್ರೀ ವೇಷ, ಪುಂಡುವೇಷ ಮುಂತಾಗಿ ಎಲ್ಲ ವೇಷಗಳನ್ನು ನಿರ್ವಹಿಸಿದ್ದಾರೆ. ಅರ್ಥಧಾರಿಯಾಗಿಯೂ ಹೆಸರು ಗಳಿಸಿದ್ದ ಅವರನ್ನು ಯಕ್ಷಗಾನದ ಸರ್ವಾಂಗ ಕಲಾವಿದ ಎಂದೇ ಕರೆಯಲಾಗುತ್ತದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪುರಸ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಸಾಧನಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.















