ಬೆಂಗಳೂರು:ಕರ್ನಾಟಕ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡ ಜಂಟಿ ಅಧಿವೇಶನವನ್ನು ಉದ್ದೇಶಿಸಿ
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಮಾತನಾಡಿದ್ದಾರೆ.
ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಮಾದರಿಯಾಗಿದೆ. ಸರಕಾರ ಜನರ ಪ್ರೀತಿ, ವಿಶ್ವಾಸ ಹಾಗೂ ಭರವಸೆಗಳಿಗೆ ಧಕ್ಕೆಯಾಗದಂತೆ ನಡೆದುಕೊಂಡಿದೆ. ಈ ಮೂಲಕ
ರಾಜ್ಯದ 7 ಕೋಟಿ ಜನರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಶಕ್ತಿ, ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಮತ್ತು ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಈ ಯೋಜನೆಗಳಿಂದಾಗಿ 1.2 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಯಿಂದ ಮಧ್ಯಮ ವರ್ಗದ ಸ್ಥಿತಿಗೆ ತಲುಪುತ್ತಿವೆ. ಸರ್ಕಾರದ ಈ ನಿರ್ಣಯದಿಂದ ರಾಜ್ಯದ 5 ಕೋಟಿಗೂ ಹೆಚ್ಚು ಜನರು ಮಧ್ಯಮ ವರ್ಗದ ಸ್ಥಿತಿಗೆ ತಲುಪುತ್ತಿರುವುದು ಜಾಗತಿಕ ದಾಖಲೆಯಾಗಿದೆ ಎಂದು ಅವರು ಹೇಳಿದ್ದಾರೆ.
ಶಕ್ತಿ ಯೋಜನೆಯ ಪ್ರಯೋಜನವನ್ನು ರಾಜ್ಯದ 3.5 ಕೋಟಿ ಮಹಿಳೆಯರು ಪಡೆಯುತ್ತಿದ್ದಾರೆ. ರಾಜ್ಯದ 1.60 ಕೋಟಿ ಜನರು ‘ಗೃಹಜ್ಯೋತಿ’ ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ. ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ನೀಡುವ ‘ಗೃಹಲಕ್ಷ್ಮಿ’ ಯೋಜನೆಯಡಿ ನೋಂದಾಯಿಸಿಕೊಂಡಿರುವ 1.17 ಕೋಟಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಜನವರಿವರೆಗೆ 11,037 ಕೋಟಿಯನ್ನು ವರ್ಗಾಯಿಸಲಾಗಿದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.
ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಕರ್ನಾಟಕವು 2023ರ ಮುಂಗಾರು ಅವಧಿಯಲ್ಲಿ 240 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಈ ಪೈಕಿ 196 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವು 31 ಜಿಲ್ಲೆಗಳಿಗೆ 324 ಕೋಟಿ ಬಿಡುಗಡೆ ಮಾಡಿದೆ ಎಂದು ರಾಜ್ಯಪಾಲ ಗೆಹ್ಲೋಟ್ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.