ಬೆಳ್ಳಾರೆ: ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಾಲಯದ ಗರ್ಭಗುಡಿಯ ನಿರ್ಮಾಣದ ಸಲುವಾಗಿ ಶಿಲಾ ಮೆರವಣಿಗೆ ನ.24ರಂದು ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು. ಆಡಳಿತ ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ಕಾಸರಗೋಡಿನ ಉದ್ಯಮಿ ಬಿ. ವಸಂತ ಪೈ ಮುಖ್ಯ ಅತಿಥಿಯಾಗಿ
ಭಾಗವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಹೊಸವಳಿಗೆ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಕೆ. ಭಟ್ ಕುರುಂಬುಡೇಲು ವಂದಿಸಿದರು. ಮಾತೃ ಮಂಡಳಿ ಅಧ್ಯಕ್ಷೆ ಸುಮಾ ವಿ. ಆಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ಶಿವಾನಿ ಮತ್ತು ಕೃತಿಕಾ ಪ್ರಾರ್ಥಿಸಿದರು. ಎರಡೂ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಕಳದಿಂದ ಬಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ತಂಗಿದ್ದ ಶಿಲೆಗಳನ್ನು ಹೊತ್ತ ವಾಹನಕ್ಕೆ ನ. 24ರಂದು ಬೆಳಿಗ್ಗೆ ಪೂಜೆ ಸಲ್ಲಿಸಿ, ಅಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸ್ವಾಗತ ಕಾರ್ಯಕ್ರಮ ನಡೆದು ಬಳಿಕ ವಾಹನ ಮೆರವಣಿಗೆ ಮೂಲಕ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಗಮಿಸಿತು. ಅಲ್ಲಿ ಲಕ್ಷ್ಮೀ ವೆಂಕಟ್ರಮಣ ದೇವಾಲಯದ ವತಿಯಿಂದ ಸ್ವಾಗತಿಸಿ ಪೂಜೆ ಸಲ್ಲಿಸಲಾಯಿತು. ಮಾಜಿ ಸಚಿವ ಎಸ್. ಅಂಗಾರ, ದೇವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಶ್ಯಾನುಭಾಗ್, ಸುರೇಶ್ ಶೆಣೈ, ಮಿಥುನ್ ಶೆಣೈ, ಅರ್ಚಕರಾದ ಅಣ್ಣುಭಟ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಪೂರ್ಣಕುಂಭ ಸ್ವಾಗತದ ಮೂಲಕ ಗೌರಿಪುರಂಗೆ ಮೆರವಣಿಗೆ ನಡೆಯಿತು.









