ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ನ.30 ಭಾನುವಾರ ಪೂ.11ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಕೆ.ಆರ್.ಗಂಗಾಧರ, ಡಾ.ಯು.ಪಿ.ಶಿವಾನಂದ, ದಂಬೆಕೋಡಿ ಸುಬ್ರಾಯ ಆನಂದ ಅವರಿಗೆ ಪ್ರಶಸ್ತಿಯನ್ನು
ನೀಡಲಾಗುವುದು.ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭವನ್ನು ಉದ್ಘಾಟಿಸುವರು.ಸ್ಪೀಕರ್ ಯು.ಟಿ.ಖಾದರ್ ಪುಸ್ತಕ ಬಿಡುಗಡೆ ಮಾಡುವರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಗೌರವ ಪ್ರಶಸ್ತಿ ಪ್ರದಾನ ಮಾಡುವರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡುವರು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಭಿನಂದನಾ ಭಾಷಣ ಮಾಡುವರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅರೆಭಾಷೆ ನಾಟಕ ಬಿಡುಗಡೆ ಮಾಡುವರು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸುವರು.
ಶಾಸಕರಾದ ಉದಯ್ ಬಿ.ಗರುಡಾಚಾರ್,ಡಾ.ಮಂತರ್ ಗೌಡ, ಭಾಗೀರಥಿ ಮುರುಳ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಕೆಂಚಪ್ಪ ಗೌಡ, ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ.ಮತ್ತಿತರರು ಭಾಗವಹಿಸಲಿದ್ದಾರೆ.ಗೌರವ ಪ್ರಶಸ್ತಿಯು 50 ಸಾವಿರ ನಗದು ಹಾಗೂ ಫಲಕವನ್ನು ಹೊಂದಿದೆ. ಅರೆಭಾಷೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತಿದೆ.
ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಅಕಾಡೆಮಿಯ ವತಿಯಿಂದ ನಿರ್ಮಿಸಿದ ‘ಅಪ್ಪ’ ಅರೆಭಾಷೆ ನಾಟಕ, ಐನ್ಮನೆ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಲಿದೆ.













