ಸುಳ್ಯ:ಸುಬ್ರಹ್ಮಣ್ಯ ಮಹಿಳಾ ಸೊಸೈಟಿ ಚುನಾವಣೆಯಲ್ಲಿ ಎರಡೂ ಪಕ್ಷಗಳ ನಾಯಕಿಯರು ಅಧಿಕಾರಕ್ಕಾಗಿ ಪಕ್ಷದ ತತ್ವ ಆದರ್ಶಗಳನ್ನು ಬದಿಗೊತ್ತಿ ಹೊಂದಾಣಿಕೆ ಮಾಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಕೆ.ಗೋಕುಲ್ದಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಮಹಿಳಾ ಸೊಸೈಟಿಯಲ್ಲಿ ಅವಿರೋಧ ಆಯ್ಕೆ ಮಾಡಿ ಸೊಸೈಟಿ ಅಧಿಕಾರವನ್ನು ಗಳಿಸಿ ತಮ್ಮ ಪಕ್ಷದ ಸಿದ್ಧಾಂತ ಹಾಗೂ
ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪಕ್ಷ ವಿರೋಧಿ ಕೆಲಸ ಮಾಡದೆ.ಪಕ್ಷಕ್ಕಾಗಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದ, ಪ್ರತಿಕ್ಷಣ ಪಕ್ಷದ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಪ್ರಮುಖ 5 ಜನರನ್ನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಯಾವುದೇ ಆಧಾರವಿಲ್ಲದೆ ಪಕ್ಷದಿಂದ ಅಮಾನತು ಮಾಡಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷರಿಗೆ ಮನವರಿಕೆಯಿದ್ದುದರಿಂದ ಈ ಅಮಾನತು ಆದೇಶವನ್ನು ವಾಪಾಸು ಪಡೆದಿದ್ದಾರೆ.

ಇದೀಗ ಸೊಸೈಟಿ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಅನುಭವಿಸುವುದು ಎಷ್ಟು ಸರಿ? ಇದಕ್ಕೆ ಪಕ್ಷದ ನಾಯಕರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ ಅವರು ತಳಮಟ್ಟದ ಚುನಾವಣೆ, ಸೊಸೈಟೆಗಳಲ್ಲಿ ನಾಯಕರು ಬಿಜೆಪಿಯೊಂದಿಗೆ ಹೊಂದಾಣಿಕೆ ರಾಜಕೀಯ ಮಾಡುವುದಾದರೆ ಕಾರ್ಯ ಕರ್ತರು ಮುಂದಿನ ಚುನಾವಣೆಯಲ್ಲಿ ಯಾವ ಆಧಾರದಲ್ಲಿ ಪಕ್ಷಕ್ಕೆ ಮತಯಾಚನೆ ಮಾಡಬೇಕು ಎಂದು ಕೇಳಿದ್ದಾರೆ. ಇತ್ತೀಚೆಗೆ ಸುಳ್ಯ ಸಿ ಎ ಬ್ಯಾಂಕ್ ಚುನಾವಣೆಗೆ 13ಕ್ಕೆ 13 ಅಭ್ಯರ್ಥಿಗಳನ್ನು ಸಹಕಾರಿ ರಂಗದಿಂದ ಕಣಕ್ಕಿಲಿಸಿ ನ್ಯಾಯಯುತ, ಸೈದ್ಧಾಂತಿಕ ಹೋರಾಟ ನಡೆಸಿದ್ದೇವೆ. ಇದು ಎಲ್ಲಾ ಸೊಸೈಟಿಗಳಿಗೂ ಅನ್ವಯವಾಗಬೇಕು. ಸೋಲು ಗೆಲುವು ಇದ್ದದ್ದೇ ಆದರೆ ಹೊಂದಾಣಿಕೆ ರಾಜಕೀಯವನ್ನು ನಾವು ಖಂಡಿಸುತ್ತೇವೆ ಎಂದು ಗೋಕುಲ್ದಾಸ್ ಹೇಳಿದ್ದಾರೆ.
ಮುಂದಿನ ಚುನಾವಣೆಗೆ ಕಾರ್ಯಕರ್ತರು ಪಕ್ಷದ ಹಿತದಿಂದ ಮತ್ತು ಬದ್ಧತೆಯಿಂದ ಹೋಗಬೇಕು ಈ ಪರಿಸ್ಥಿತಿಯನ್ನು ನಾಯಕರು ಅರ್ಥಮಾಡಿಕೊಳ್ಳಬೇಕು ಎಂದರು.
ಅಕ್ರಮ ಸಕ್ರಮ ಸಮಿತಿ ರಚನೆಯನ್ನು ಸರಕಾರ ಮಾಡಿದ್ದು ಅಕ್ರಮ ಸಕ್ರಮ ಸಮಿತಿ ಜನರಿಗೆ ಉತ್ತಮ ಸೇವೆ ನೀಡಬೇಕು ಸಮಿತಿ ಭ್ರಷ್ಟಾಚಾರ ರಹೀತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಭವಾನಿಶಂಕರ ಕಲ್ಮಡ್ಕ, ಸಚಿನ್ರಾಜ್ ಶೆಟ್ಟಿ ಪೆರುವಾಜೆ, ಆನಂದ ಬೆಳ್ಳಾರೆ ಉಪಸ್ಥಿತರಿದ್ದರು.










