*ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತವು ಚಾರಣಿಗರ ಸ್ವರ್ಗ.ಇಲ್ಲಿನ ಗಿರಿಗದ್ದೆಯಲ್ಲಿರುವ ಭಟ್ಟರ ಮನೆಯು ಚಾರಣಿಗರಿಗೆ ಊಟ ಉಪಹಾರ ನೀಡುವ ಅಕ್ಷಯ ಪಾತ್ರೆ. ಇದೀಗ ಭಟ್ಟರ ಮನೆಯ ಗೋಡೆಗೆ ನಮ್ಮ ಕುಡ್ಲ ಚಾರಣಿಗರ ಸಂಘದ ಉತ್ಸಾಹಿ ಯುವ ಸದಸ್ಯರು ವರ್ಲಿ ಅಲಂಕಾರ ಬಿಡಿಸುವ ಮೂಲಕ ಚಿತ್ತಾಕರ್ಷಕವಾಗಿಸಿದ್ದಾರೆ.
ಸುಬ್ರಹ್ಮಣ್ಯದಿಂದ ಸುಮಾರು 8 ಕಿ.ಮಿ ದೂರವಿರುವ ಗಿರಿಗದ್ದೆಯ ಮಹಾಲಿಂಗೇಶ್ವರ ಭಟ್ ಅವರ ಮನೆಗೆ ವರ್ಲಿ ಚಿತ್ರಾಲಂಕಾರ ಬಿಡಿಸಲು

ಸಲುವಾಗಿಯೇ ನಮ್ಮ ಕುಡ್ಲ ಚಾರಣ ಸಂಘದ ಸಂಸ್ಥಾಪಕ ಜಯರಾಮ ಪಂಬೆತ್ತಾಡಿ ನೇತೃತ್ವದಲ್ಲಿ ಬೆಟ್ಟ ಏರಿದರು. ಭಾರೀ ಮಳೆಯ ಅಬ್ಬರದ ನಡುವೆ ಬೆಟ್ಟ ಏರಿ ಆಗಸ್ಟ್ ನಲ್ಲಿ ಚಿತ್ರಾಲಂಕಾರ ಆರಂಭಿಸಿದ ಇವರು ಅಕ್ಟೋಬರ್ ಮೊದಲ ವಾರದಲ್ಲಿ ಪೂರ್ಣಗೊಳಿಸಿದ್ದಾರೆ.
ಸುಮಾರು ಎರಡು ತಿಂಗಳ ಕಾಲ ನಿರಂತರವಾಗಿ ಚಿತ್ರಕಲೆಯ ಚಿತ್ತಾರವನ್ನು ಗೋಡೆ ಮೇಲೆ ಚಿತ್ರೀಕರಿಸಿದರು. ಇದೀಗ ಗೋಡೆಗಳು ಚಿತ್ರಾಲಂಕಾರ ದಿಂದ ಕಂಗೊಳಿಸುತ್ತಿದ್ದು, ವರ್ಲಿ ಕಲೆಯ ಮೆರುಗು ಚಾರಣೀಗರನ್ನು ಸೆಳೆಯುತಿದೆ.
600 ಗಿಡ ನೆಟ್ಟ ಸಂಘ:
ಚಾರಣಿಗರಿಗೆ ಉತ್ತೇಜನ ನೀಡುವುದರೊಂದಿಗೆ ಕಳೆದ ಮೂರು ವರ್ಷಗಳಿಂದ ಕುಮಾರಪರ್ವತದಲ್ಲಿ ಸುಮಾರು 600ಕ್ಕೂ ಮಾವಿನ ಗಿಡಗಳನ್ನು ನೆಟ್ಟು ವನ ಸಮೃದ್ದಿಗೆ ತನ್ನದೇ ಕೊಡುಗೆಯನ್ನು ನಮ್ಮ ಕುಡ್ಲ ಚಾರಣ ಸಂಘ ನೀಡುತ್ತಿದೆ. ಅಲ್ಲದೆ ಕಳೆದ ಮೂರು ವರ್ಷಗಳಿಂದ ಕುಮಾರಪರ್ವತದಿಂದ ಸುಬ್ರಹ್ಮಣ್ಯ ದ ತನಕ ವರ್ಷದಲ್ಲಿ ಮೂರು ಬಾರಿ ಸ್ವಚ್ಚತಾ ಸೇವೆ ಮಾಡುತ್ತಿದೆ.ಸಂಘದ ಪರಿಶ್ರಮದಿಂದ ವಿನೂತನ ಪ್ರಯೋಗವಾಗಿ ಭಟ್ ರ ಮನೆಯ ಗೋಡೆಯು ಚಿತ್ತಾಕರ್ಷಕಗೊಂಡಿತು.
ನಮ್ಮ ಕುಡ್ಲ ಚಾರಣ ಸಂಘದ ಸಂಸ್ಥಾಪಕ
ಜಯರಾಮ ಪಂಬೆತ್ತಾಡಿ ನೇತೃತ್ವದಲ್ಲಿ ಸಂಘದ ಸದಸ್ಯರಾದ ಚಿತ್ರಕಲಾವಿದರಾದ ಉಮೇಶ್ ಎಂ.ವಿ ಪುತ್ತೂರು, ಮಿಥುನ್ ರೈ ಕಡಬ ಚಿತ್ತಾರ ಬಿಡಿಸಿದರು. ಇವರಿಗೆ ಗಿರಿಗದ್ದೆ ಮಹಾಲಿಂಗೇಶ್ವರ ಭಟ್ಟರು, ನಾರಾಯಣ ಭಟ್,ಅರಣ್ಯ ರಕ್ಷಕ ಸಜ್ಜನ್, ಅರಣ್ಯ ವೀಕ್ಷಕರಾದ ಮಿಲನ್, ವಂಶಿ, ಗುರುಕಾಂತ್, ಕಲಾವಿದ ರಾಮಚಂದ್ರ ದೇವರಗದ್ದೆ ಅವರು ಸಹಕಾರ ನೀಡಿದ್ದರು.

ಆರಂಭದಲ್ಲಿ ಮನೆಯ ಗೋಡೆಯನ್ನು ಚೆನ್ನಾಗಿ ತೊಳೆದು ಸ್ವಚ್ಚಗೊಳಿಸಲಾಯಿತು. ಬಳಿಕ ಅದಕ್ಕೆ ಬಣ್ಣ ಬಳಿಯಲಾಯಿತು.ನಂತರ ವರ್ಲಿ ಚಿತ್ರಾಲಂಕಾರ ಬಿಡಿಸಿದರು.ಮನೆಯ ಗೋಡೆಯ ಮೇಲೆ ಕುಮಾರಪರ್ವತದ ವಿಹಂಗಮ ನೋಟ, ಕುಮಾರಪರ್ವತದ ವನರಾಶಿಯ ಸ್ನಿಗ್ಧ ಸೌಂದರ್ಯ, ಕುಕ್ಕೆ ಜಾತ್ರೆಯ ಸೊಬಗು, ಕುಕ್ಕೆಯ ಗೋಪುರವನ್ನು ಮೂಡಿಸಲಾಗಿದೆ.
ಅಲ್ಲದೆ ಚಿತ್ರದ ಮೂಲಕ ಪರಿಸರ ಜಾಗೃತಿ, ಪರಿಸರ ಸ್ವಚ್ಚತೆ ಮತ್ತು ಚಾರಣ ತಾಣದ ಸ್ಚಚ್ಚತೆಯ ಅಗತ್ಯತೆಯನ್ನು ತಿಳಿಸಲಾಗಿದೆ. ಈ ಮೂಲಕ ಮನೆಯ ಸೌಂದರ್ಯ ಅಧಿಕವಾಗುವುದರೊಂದಿಗೆ ಚಾರಣಿಗರಿಗೆ ಜಾಗೃತಿಯ ಸಂದೇಶವು ತಲುಪಿಸಿದಂತಾಗಿದೆ.

‘ಕುಕ್ಕೆಯಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ಕುಮಾರಪರ್ವತಕ್ಕೆ ಚಾರಣ ಮಾಡುತ್ತಿದ್ದೆ. ಉದ್ಯೋಗಕ್ಕೆ ಸೇರಿದ ಬಳಿಕ ಉದ್ಯೋಗಸ್ಥ ಚಾರಣಾಸಕ್ತರನ್ನು ಸೇರಿಸಿಕೊಂಡು ಚಾರಣ ಸಂಘ ಆರಂಭಿಸಿದೆ.ಚಾರಣ ಕ್ಷೇತ್ರದಲ್ಲಿ ಸ್ವಚ್ಚತೆ ಕಾಪಾಡುವುದು,ಪರಿಸರ ಜಾಗೃತಿ, ಅರಣ್ಯ ಸಮೃದ್ದಿಗೆ ವನಮಹೋತ್ಸವ ಸೇರಿದಂತೆ ಸಮಾಜಮುಖಿ ಸೇವೆಯನ್ನು ನಮ್ಮ ಸಂಘವು ಮಾಡುತ್ತಿದೆ.ಇದೀಗ ವಿಶೇಷವಾಗಿ ಚಾರಣಿಗರಿಗೆ ಊಟ ಉಪಹಾರ ನೀಡುವ ಗಿರಿಗದ್ದೆ ಭಟ್ ರ ಮನೆಯ ಗೋಡೆಯ ಮೇಲೆ ವರ್ಲಿ ಚಿತ್ರ ಬಿಡಿಸುವ ಮೂಲಕ ಆಕರ್ಷಕಗೊಳಿಸುವುದರೊಂದಿಗೆ ಪರಿಸರ ಜಾಗೃತಿ ಮತ್ತು ಸ್ವಚ್ಚತಾ ಜಾಗೃತಿ ಯ ಅರಿವು ಮೂಡಿಸಲಾಗಿದೆ.ಇದು ಸರ್ವ ಚಾರಣಿಗರ ಪ್ರಶಂಸೆಗೆ ಪಾತ್ರವಾಗಿದೆ’
ಜಯರಾಮ ಪಂಬೆತ್ತಾಡಿ ಸಂಸ್ಥಾಪಕರು, ನಮ್ಮ ಕುಡ್ಲ ಚಾರಣ ಸಂಘ.

ಮನೆಯ ಗೋಡೆಯ ಮೇಲೆ ಸುಂದರವಾಗಿ ವರ್ಲಿ ಅಲಂಕಾರ ಮೂಡಿ ಬಂದಿದೆ.ಇದು ಚಿತ್ತಾಕರ್ಷಕ ವಾಗಿದ್ದು ಮನೆಯ ಸೌಂದರ್ಯ ವನ್ನು ಇಮ್ಮಡಿಗೊಳಿಸುವುದರೊಂದಿಗೆ ಪರಿಸರ ಜಾಗೃತಿ ಯನ್ನು ಮೂಡಿಸುತಿದೆ.
-ನಾರಾಯಣ ಭಟ್ ಗಿರಿಗದ್ದೆ