ಮುಕ್ಕೂರು:ಜನ್ಮಕೊಟ್ಟ ತಂದೆ ತಾಯಿಯ ಸೇವೆ ಮಾಡದೇ, ನಾವು ದೇವರಿಗೆ ಎಷ್ಟೇ ಪೂಜೆ, ಪುನಸ್ಕಾರ ಮಾಡಿದರೂ ಅದರಿಂದ ಯಾವುದೇ ಫಲ ದೊರೆಯಲು ಸಾಧ್ಯವಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಸಂಭ್ರಮದ ಪುಳಕ ಮೂರೈದು-ಹದಿನೈದರ ಹುತ್ತರಿಯ ಪ್ರಯುಕ್ತ ಮುಕ್ಕೂರು ವಠಾರದಲ್ಲಿ ನಡೆದ
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಮನೆ ಸಂಸ್ಕಾರದ ಹೇಳುವ ಪಾಠ ಶಾಲೆ ಆಗಬೇಕು. ಹೆತ್ತವರನ್ನು ಪ್ರೀತಿಸದಿದ್ದರೆ ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಪ್ರಯೋಜನ ಇಲ್ಲ ಅನ್ನುವ ಸತ್ಯ ಮಕ್ಕಳಿಗೆ ಅರಿವಾಗಬೇಕು. ಹೆತ್ತವರಿಗೆ ಮನೆಯೇ ದೇವಾಲಯ ಹೊರತು ಆಶ್ರಮಗಳು ಅಲ್ಲ ಅನ್ನುವುದು ನಮಗೆ ಮನದಟ್ಟಾಗಬೇಕು ಎಂದರು.
ಎಸ್ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ ಅವರು ಸಮ್ಮಾನ ನೆರವೇರಿಸಿ ಮಾತನಾಡಿ, ಮುಕ್ಕೂರಿನಲ್ಲಿ ಅತ್ಯಂತ ವಿಶಿಷ್ಟ ರೀತಿಯಲ್ಲಿ ಗಣೇಶೋತ್ಸವ ಆಚರಿಸಲಾಗಿದೆ. ಸಂಸ್ಕೃತಿಯ ಸಾರವನ್ನು ಅರಿತುಕೊಂಡು ದೇವರನ್ನು ಭಕ್ತಿ ಭಾವದಿಂದ ಆರಾಧಿಸುವ ಕಾರ್ಯ ಇಲ್ಲಿ ಹಬ್ಬದ ರೂಪ ಪಡೆದಿದೆ. ಇದೊಂದು ಮಾದರಿ ಆಚರಣೆ. ಮೂರೈದು ಆಚರಣೆಯು ಅಚ್ಚುಕಟ್ಟುತನ, ವ್ಯವಸ್ಥಿತ ರೀತಿಯಲ್ಲಿ ಗಮನ ಸೆಳೆದಿದೆ ಎಂದರು.
ಎಣ್ಮೂರು ಸ.ಪ್ರೌ.ಶಾಲಾ ಆಂಗ್ಲಭಾಷಾ ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಅಭಿನಂದನಾ ಮಾತುಗಳನ್ನಾಡಿದರು. ಕುಂಬ್ರ ದಯಾಕರ ಆಳ್ವ, ಹೊನ್ನಪ್ಪ ಗೌಡ ಚಾಮುಂಡಿಮೂಲೆ ಅವರನ್ಬು ಸನ್ಮಾನಿಸಲಾಯಿತು.
ಪುತ್ತೂರು ಐಎಂಎ ಘಟಕದ ಅಧ್ಯಕ್ಷ, ವೈದ್ಯ ಡಾ.ನರಸಿಂಹ ಶರ್ಮಾ, ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಸಭಾಧ್ಯಕ್ಷತೆ ವಹಿಸಿದ್ದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಕುಂಡಡ್ಕ ಉಪಸ್ಥಿತರಿದ್ದರು. ದೇವಿಕಾ ಕುರಿಯಾಜೆ ಕಾರ್ಯಕ್ರಮ ನಿರೂಪಿಸಿದರು.