ಸುಳ್ಯ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರಂತೆ ನಮಗೆ ಬದುಕಲು ಅಸಾಧ್ಯ. ಆದರೆ ಅವರ ತತ್ವ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಕನಸನ್ನು ನನಸಾಗಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಅವರು ಗಾಂಧಿ ಚಿಂತನ ವೇದಿಕೆ ಸುಳ್ಯ, ನಗರ ಪಂಚಾಯತ್ ಸುಳ್ಯ ಸಹಭಾಗಿತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ರಾಷ್ಟ್ರ ಪಿತ ಮಹಾತ್ಮಾ ಗಾಂಧೀಜಿಯವರು ಸುಳ್ಯಕ್ಕೆ ಬಂದು 90 ವರ್ಷ ಆಗಿರುವ ಪ್ರಯುಕ್ತ ಸುಳ್ಯದಲ್ಲಿ ಶನಿವಾರ ನಡೆದ ಗಾಂಧಿ ನಡಿಗೆ ಹಾಗೂ ಗಾಂಧಿ ಪಾರ್ಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ
ಗಾಂಧಿ ಪಾರ್ಕ್ ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾತ್ಮಾ ಗಾಂಧೀಜಿ ಎಲ್ಲವನ್ನೂ ತ್ಯಜಿಸಿ ಬದುಕಿದವರು. ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನ ನಡೆಸಬೇಕೆಂಬ ಅವರ ಕನಸನ್ನು ನಾವು ಈಡೇರಿಸಬೇಕಿದೆ. ಗಾಂಧೀಜಿ ಬದುಕಿದ ರೀತಿ, ಅವರ ತತ್ವ, ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಜೊತೆಗೆ ಸಮಾಜ ತಿದ್ದುವ ಕಲಸ ಮಾಡಬೇಕು ಎಂದ ಅವರು ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧಿ ಅವರ ಆದರ್ಶದಂತೆ ಸ್ವಚ್ಚತೆಗೆ ಆದ್ಯತೆ ನೀಡಿ ಆಡಳಿತ ನಡೆಸುತ್ತಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ಬಿ.ಈ. ಮಾತನಾಡಿ, ಗಾಂಧೀಜಿ ಅವರ ಬದುಕೇ ನಮಗೆಲ್ಲ ಆದರ್ಶ. ಸಮಾಜದಲ್ಲಿ ಸಮಾನತೆಯನ್ನು ಕಂಡ ಗಾಂಧೀಜಿ ಶಿಕ್ಷಣಕ್ಕಾಗಿ, ಸಮಾಜ ತಿದ್ದಲು ಹೋರಾಟ ನಡೆಸಿದರು. ಸತ್ಯ, ಅಹಿಂಸೆ, ಸತ್ಯಾಗ್ರಹದ ಮೂಲಕ ಹೋರಾಡಿ ಸೌಹಾರ್ಧತೆಗೆ ದುಡಿದರು ಎಂದರು. ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಫಾ.ವಿಕ್ಟರ್ ಡಿಸೋಜ, ನಾರಾಯಣ ರೈ ಗಾಂಧಿನಗರ, ಉಮ್ಮರ್ ಮೆಟ್ರೋ, ಆದಂ ಹಾಜಿ ಕಮ್ಮಾಡಿ, ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕೇರಿ, ಸರೋಜಿನಿ ಪೆಲ್ತಡ್ಕ, ಶರೀಫ್ ಕಂಠಿ, ನ.ಪಂ.ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಉಪಸ್ಥಿತರಿದ್ದರು.
ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ
ಹರೀಶ್ ಬಂಟ್ವಾಳ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.