ಸುಳ್ಯ:ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 1934ರಲ್ಲಿ ಸುಳ್ಯಕ್ಕೆ ಆಗಮಿಸಿದ್ದರು. ಗಾಂಧೀಜಿಯವರು ಸುಳ್ಯಕ್ಕೆ ಆಗಮಿಸಿದ 90 ವರ್ಷ ಆಗಿರುವ ಹಿನ್ನಲೆಯಲ್ಲಿ ಆ ದಿನದ ನೆನಪಿಗಾಗಿ ಸುಳ್ಯದ ಗಾಂಧಿ ಚಿಂತನ ವೇದಿಕೆ ವತಿಯಿಂದ ಗಾಂಧಿ ನಡಿಗೆ ಕಾರ್ಯಕ್ರಮ ಫೆ.24 ರಂದು ನಡೆಯಲಿದೆ ಎಂದು ಸುಳ್ಯದ ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ತಿಳಿಸಿದರು. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ ಪರಿವರ್ತನೆ ಮತ್ತು
ಸ್ವಾತಂತ್ರ್ಯದ ಜಾಗೃತಿಗಾಗಿ ಮಹಾತ್ಮ ಗಾಂಧಿಯವರು ದೇಶದಾದ್ಯಂತ ಪ್ರಯಾಣ ನಡೆಸುತ್ತಿದ್ದ ಸಂದರ್ಭದಲ್ಲಿ ಅದರ ಅಂಗವಾಗಿ 1934 ಫೆ.24ರಂದು ಸುಳ್ಯಕ್ಕೆ ಆಗಮಿಸಿದ್ದರು. ಅಂದು ಅವರು ಸುಳ್ಯದ ಮೊಗರ್ಪಣೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದರು. ಆ ಕಾರ್ಯಕ್ರಮಕ್ಕೆ 90 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಫೆ.24 ರಂದು ಬೆಳಗ್ಗೆ 9 ಗಂಟೆಗೆ ಸುಳ್ಯದ ಜ್ಯೋತಿ ವೃತ್ತದಿಂದ ನಗರದ ಗಾಂಧಿನಗರದ ವರೆಗೆ ಗಾಂಧಿ ನಡಿಗೆ ನಡೆಯಲಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ. ಗಾಂಧಿನಗರದಲ್ಲಿ ನ.ಪಂ. ಸದಸ್ಯ ಶರೀಫ್ ಕಂಠಿ ನೇತೃತ್ವದಲ್ಲಿ ನಿರ್ಮಾಣಗೊಂಡ ಗಾಂಧಿ ಸ್ತಂಭವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ಬಿ.ಈ. ಗಾಂಧೀಜಿ ಬಗ್ಗೆ ಉಪನ್ಯಾಸ ನೀಡುವರು. ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಗಾಂಧೀಜಿ ಅವರು ಸುಳ್ಯಕ್ಕೆ ಭೇಟಿ ನೀಡಿ 80 ವರ್ಷದ ವರ್ಷಾಚರಣೆ ಸಂದರ್ಭದಲ್ಲಿ 2014ರಲ್ಲಿ ಗಾಂಧಿ ಚಿಂತನ ವೇದಿಕೆಯ ನೇತೃತ್ವದಲ್ಲಿ ಗಾಂಧಿನಗರದಿಂದ ಮೊಗರ್ಪಣೆ ವರೆಗೆ ಗಾಂಧಿ ನಡಿಗೆ ಏರ್ಪಡಿಸಲಾಗಿತ್ತು.ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಬೆಳ್ಳಾರೆಯಿಂದ ಸುಳ್ಯದ ತನಕ ಗಾಂಧಿ ನಡಿಗೆ ಹಮ್ಮಿಕೊಳ್ಳಲಾಗಿತ್ತು ಎಂದು ಹರೀಶ್ ಬಂಟ್ವಾಳ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗಾಂಧಿ ಚಿಂತನ ವೇದಿಕೆಯ ಸಂಚಾಲಕರಾದ ಚಂದ್ರಶೇಖರ ಪೇರಾಲು, ಶಂಕರ ಪೇರಾಜೆ, ಶರೀಫ್ ಕಂಠಿ ಉಪಸ್ಥಿತರಿದ್ದರು.









