ಹೊಸದಿಲ್ಲಿ:ನವದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಜಿ20 ಶೃಂಗಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಅಧಿವೇಶನಗಳಲ್ಲಿ ಒಂದು ಭೂಮಿ, ಒಂದು ಕುಟುಂಬ’ ಕುರಿತಾಗಿ ವ್ಯಾಪಕವಾದ ಚರ್ಚೆಗಳನ್ನು ನಡೆಸಲಾಗಿದೆ. ಜಿ20 ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ದೃಷ್ಟಿಗೆ ಸಂಬಂಧಿಸಿದಂತೆ ಆಶಾವಾದಿ ಪ್ರಯತ್ನಗಳಿಗೆ
ವೇದಿಕೆಯಾಗಿದೆ ಎಂಬ ತೃಪ್ತಿ ಇದ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಮಾರೋಪ ಭಾಷಣದಲ್ಲಿ ಹೇಳಿದರು. 2024ರ ಜಿ20 ಶೃಂಗಸಭೆ ಬ್ರಿಝಿಲ್ನಲ್ಲಿ ನಡೆಯಲಿದ್ದು ಅಧ್ಯಕ್ಷ ಸ್ಥಾನದ ವಿಧ್ಯುಕ್ತ ವರ್ಗಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಝಿಲ್ ಅಧ್ಯಕ್ಷ ಲೂಯಿಝ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಬ್ಯಾಟನ್ ಹಸ್ತಾಂತರಿಸುವ ಮೂಲಕ ನೆರವೇರಿಸಿದರು.
ಇಂದು ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಜಿ20 ನಾಯಕರು ದೆಹಲಿಯ ರಾಜ್ಘಾಟ್ಗೆ ಭೇಟಿ ನೀಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ, ಓಮನ್ ಉಪಪ್ರಧಾನಿ ಅಸಾದ್ ಬಿನ್ ತಾರಿಕ್ ಬಿನ್ ತೈಮೂರ್ ಅಲ್ ಸೈದ್, ಸಿಂಗಪುರದ ಪ್ರಧಾನಿ ಲೀ ಸೀನ್ ಲೂಂಗ್ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಸೇರಿದಂತೆ ನಾಯಕರು ರಾಜ್ಘಾಟ್ಗೆ ಭೇಟಿ ನೀಡಿ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.