ಸುಳ್ಯ:ಸುಳ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾಂಗ್ರೆಸ್ ಪಕ್ಷದ ಗುರಿ. ಎಲ್ಲರನ್ನೂ ಒಟ್ಟು ಸೇರಿಸಿ ಚುನಾವಣಾ ಪ್ರಚಾರ ನಡೆಸಿ ಗೆಲುವು ಸಾಧಿಸುತ್ತೇವೆ ಎಂದು ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಹೇಳಿದ್ದಾರೆ. ಸುಳ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ‘ಸುಳ್ಯ ಮಿರರ್’ ಜೊತೆ ಮಾತನಾಡಿದ ಅವರು ಸುಳ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಕಾಂಗ್ರೆಸ್ ಹೈ ಕಮಾಂಡ್ಗೆ ಕೃತಜ್ಞತೆ ಸಲ್ಲಿಸಿದರು. ಕಳೆದ
30 ವರ್ಷಗಳಿಂದ ಬಿಜೆಪಿ ಶಾಸಕರಿದ್ದರೂ ಸುಳ್ಯ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಸುಳ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ಕಾಂಗ್ರೆಸ್ ಗುರಿ. ಸುಳ್ಯ ಕ್ಷೇತ್ರದ ರಸ್ತೆಗಳ ಅಭಿವೃದ್ಧಿ, ವಿದ್ಯುತ್ ಸಮಸ್ಯೆಗೆ ಪರಿಹಾರ, ಅಡಿಕೆ ಹಳದಿ ರೋಗದಿಂದ ಕೃಷಿ ನಾಶವಾದ ಕೃಷಿಕರಿಗೆ ಪರಿಹಾರ ಸೇರಿದಂತೆ ಸುಳ್ಯದ ಬೇಡಿಕೆಗಳಿಗೆ ಪೂರಕವಾಗಿ ಸ್ಪಂಧಿಸುತ್ತೇವೆ ಎಂದು ಹೇಳಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯಾಗಲಿದ್ದು ಕಾಂಗ್ರೆಸ್ಗೆ ಪೂರಕ ವಾತಾವರಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿ.ಕೃಷ್ಣಪ್ಪ ಪರಿಚಯ:
ಸಕಲೇಶಪುರದ ಕೆರೋಡಿಯವರಾದ ಜಿ.ಕೃಷ್ಣಪ್ಪ ಪ್ರಥಮ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಕೃಷ್ಣಪ್ಪ ಎಂಎಸ್ಸಿ ಪಧವೀಧರರು ಹಾಗು ಎಂಎ ಪಧವೀಧರರು. ಎನ್ಎಸ್ಯುಐ, ಯುವ ಕಾಂಗ್ರೆಸ್ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಕೃಷ್ಣಪ್ಪ ಅವರು ಎನ್ಎಸ್ಯುಐ ರಾಜ್ಯ ಕಾರ್ಯದರ್ಶಿ, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೆಪಿಸಿಸಿ ಸದಸ್ಯರು, ಕೆಪಿಸಿಸಿ ಸಂಯೋಜಕರು ಆಗಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಜಿ.ಕೃಷ್ಣಪ್ಪ ಕಳೆದ 4 ವರ್ಷಗಳಿಂದ ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರಾಗಿದ್ದಾರೆ.