ಬೆಂಗಳೂರು: ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಇನಿಂಗ್ಸ್ ಮುನ್ನಡೆ ಗಳಿಸಿದೆ.
ಮಳೆಯಿಂದಾಗಿ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು.ಎರಡನೇ ದಿನದಾಟದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಆದರೆ ನ್ಯೂಜಿಲೆಂಡ್ ಬೌಲರ್ಗಳ ನಿಖರ ದಾಳಿಯ ಮುಂದೆ ಭಾರತದ
ಬ್ಯಾಟರ್ಗಳ ಬಳಿ ಉತ್ತರವೇ ಇರಲಿಲ್ಲ.ಭಾರತ ತಂಡವು 31.2 ಓವರ್ಗಳಲ್ಲಿ ಕೇವಲ 46 ರನ್ನಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.ಬಳಿಕ ದಿಟ್ಟ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಇನಿಂಗ್ಸ್ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ.ಎರಡನೇ ದಿನದಾಟದ ಅಂತ್ಯಕ್ಕೆ 50 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿದೆ. ಆ ಮೂಲಕ ಮೊದಲ ಇನಿಂಗ್ಸ್ನಲ್ಲಿ 134 ರನ್ಗಳ ಮುನ್ನಡೆ ಗಳಿಸಿದೆ.
ರಚಿನ್ ರವೀಂದ್ರ (22) ಹಾಗೂ ಡೆರಿಲ್ ಮಿಚೆಲ್ (14) ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ನಾಯಕ ಟಾಮ್ ಲೇಥಮ್ 15 ಹಾಗೂ ವಿಲ್ ಯಂಗ್ 33 ರನ್ ಗಳಿಸಿ ಔಟ್ ಆದರು. ಡೆವೊನ್ ಕಾನ್ವೆ 91 ರನ್ ಗಳಿಸಿ ಔಟ್ ಆದರು. ಆ ಮೂಲಕ ಕೇವಲ 9 ರನ್ ಅಂತರದಲ್ಲಿ ಶತಕ ವಂಚಿತರಾದರು.ಇದು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದಿಂದ ದಾಖಲಾದ ಮೂರನೇ ಕನಿಷ್ಠ ಮೊತ್ತವಾಗಿದೆ.
ಟೀಮ್ ಇಂಡಿಯಾದ ಐವರು ಬ್ಯಾಟರ್ಗಳು ಶೂನ್ಯಕ್ಕೆ ಔಟ್ ಆದರು. ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆ.ಎಲ್.ರಾಹುಲ್, ರವೀಂದ್ರ ಜಡೇಜ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ರಿಷಭ್ ಪಂತ್ ಗರಿಷ್ಠ 20 ರನ್ ಗಳಿಸಿದರು.ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ ಐದು (15/5), ವಿಲಿಯಂ ಒ ರೂರ್ಕಿ (22/4) ಮತ್ತು ಟಿಮ್ ಸೌಥಿ (8/1) ಒಂದು ವಿಕೆಟ್ ಗಳಿಸಿ ಮಿಂಚಿದರು.