ಸುಳ್ಯ:ಸುಳ್ಯದ ಫ್ಯಾನ್ಸಿ ಹಾರ್ಡ್ವೇರ್, ಫುಟ್ವೇರ್, ಬಟ್ಟೆ, ದಿನಸಿ ಮುಂತಾದ ಅಂಗಡಿಗಳ ಮಾಲೀಕರ ವಿಶೇಷ ಸಭೆ ಸುಳ್ಯದ ವರ್ತಕರ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ನಡೆಯಿತು. ಸುಮಾರು ನೂರಕ್ಕೂ ಅಧಿಕ ಮಂದಿ ವರ್ತಕರು ಸಭೆಯಲ್ಲಿ ಭಾಗವಹಿಸಿದ್ದರು. ಹಿರಿಯ ವರ್ತಕ ಎಂ ಬಿ ಸದಾಶಿವ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ
ಅನೂಪ್ ಕಮಲಾಕ್ಷ ಪೈ,ಮಾಧವ ದೀಕ್ಷಾ, ಶೃತಿ ಉಪ್ಪಳಿಕೆ, ಕೇಶವ ಪ್ರಭು ಮುಂತಾದವರಿದ್ದರು.ಗೋಕುಲಂನ ರಾಮಚಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ವರ್ತಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಸಭಾಭವನ, ಕಲ್ಯಾಣ ಮಂಟಪಗಳಲ್ಲಿ ಗುಣಮಟ್ಟವಿಲ್ಲದ ಬಟ್ಟೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ನಿಯಂತ್ರಣ ಹೇರುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.ನಗರ ಪಂಚಾಯತ್, ಪೊಲೀಸ್ ಮತ್ತು ಇತರ ಇಲಾಖೆಗಳಿಗೆ ಈ ಕುರಿತು ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ವಾಹನಗಳಲ್ಲಿ ದಿನಸಿ ವಸ್ತು ಮಾರಾಟ ಮಾಡುವ ವಿಚಾರವನ್ನು ಸಭೆಯಲ್ಲಿ ಚರ್ಚಿಸಲಾಯಿತು, ಗುಣಮಟ್ಟವಿಲ್ಲದ ಗೃಹ ಬಳಕೆಯ ವಸ್ತುಗಳನ್ನು ಮನೆ ಮನೆಗಳಿಗೆ ಸುಲಭ ಕಂತಿನ ರೂಪದಲ್ಲಿ ಮಾರಾಟ ಮಾಡುವುದರ ಬಗ್ಗೆಯೂ ಸಂಬಂಧಿಸಿದವರ ಗಮನಕ್ಕೆ ತರಬೇಕೆಂದು ತೀರ್ಮಾನಿಸಲಾಯಿತು. ಯೂಟ್ಯೂಬರ್ಗಳು ಈ ವಸ್ತುಗಳ ವೈಭವೀಕರಣ ಮಾಡುವುದನ್ನು ನಿಲ್ಲಿಸುವಂತೆ ವಿನಂತಿಸಲು ನಿರ್ಧರಿಸಲಾಯಿತು.
ಕೆಲವು ಬಟ್ಟೆ ವ್ಯಾಪಾರಿಗಳು ಸ್ಪರ್ಧೆಗೆ ವ್ಯಾಪಾರ ಧರ್ಮವನ್ನು ಕಾಪಾಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಕೆಲವರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಎಂ.ಬಿ.ಸದಾಶಿವ ಮಾತನಾಡಿ ಎಲ್ಲಾ ವ್ಯಾಪಾರಿಗಳು ಸ್ವಯಂ ನಿರ್ಬಂಧ ಹಾಕಿಕೊಂಡು ವರ್ಷದಲ್ಲಿ ಒಂದು ಅಥವಾ ಎರಡು ದಿನಗಳು ಮಾತ್ರ ದರ ಕಡಿತದ ಮಾರಾಟದಂತಹಾ ಸೇವೆಯನ್ನು ಗ್ರಾಹಕರಿಗೆ ಕೊಡಬೇಕು. ವರ್ಷಪೂರ್ತಿ ಅಥವಾ ಆಗಿಂದಾಗ ಇಂಥ ಕೊಡುಗೆಗಳನ್ನು ಕೊಡುವುದು ಒಳ್ಳೆಯ ವ್ಯಾಪಾರ ನೀತಿಯಲ್ಲ ಎಂದು ಅಭಿಪ್ರಾಯಪಟ್ಟರು. ವ್ಯಾಪಾರಿಗಳಲ್ಲಿ ಒಗ್ಗಟ್ಟಿರಲಿ ನೀತಿ ಸಂಹಿತೆಯೊಂದಿಗೆ ಸೇವಾ ಮನೋಭಾವ ಮುಖ್ಯವಾಗಿ ಇರಲಿ ಎಂದು ಅವರು ಹೇಳಿದರು.









