ಸುಳ್ಯ:ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾವಣೆಗೆ ಮತದಾರರಿಗೆ ಮತಯಂತ್ರದ (ಇವಿಎಂ ಮಿಷನ್) ಬದಲು ಬ್ಯಾಲೆಟ್ ಪೇಪರ್ ನೀಡಬೇಕೆಂಬ ಬೇಡಿಕೆಯೊಂದಿಗೆ ಸಂಪಾಜೆಯಿಂದ ಸುಳ್ಯಕ್ಕೆ ಹಿರಿಯರಾದ ರೈತ ಮುಖಂಡ ದಿವಾಕರ ಪೈ ಏಕಾಂಗಿಯಾಗಿ ಪಾದಯಾತ್ರೆ ನಡಸಿ ಸರಕಾರಕ್ಕೆ ಮನವಿ ಸಲ್ಲಿಸಿದ ಘಟನೆ ಗುರುವಾರ ನಡೆದಿದೆ. ಬೆಳಗ್ಗೆ ಸಂಪಾಜೆಯಿಂದ ಪಾದಾಯಾತ್ರೆಗೆ ಚಾಲನೆ ನೀಡಲಾಯಿತು. ಸಂಪಾಜೆಯ
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಂಪಾಜೆ ಗೇಟಿನ ಬಳಿ ತೆಂಗಿನಕಾಯಿ ಒಡೆಯುವುದರ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಸಂಪಾಜೆಯಿಂದ ಪಾದಾಯಾತ್ರೆ ಮೂಲಕ ಸಂಜೆ ಸುಳ್ಯಕ್ಕೆ ತಲುಪಿದ ದಿವಾಕರ ಪೈ ಅವರನ್ನು ಪ್ರಮುಖರು ಸ್ವಾಗತಿಸಿ, ತಂಪು ಪಾನಿಯ ನೀಡಿದರು. ಬಳಿಕ ಚುನಾವಣೆಗಳಲ್ಲಿ ಇವಿಎಂ ಮಿಷನ್ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆ ಆಗಬೇಕೆಂದು ಒತ್ತಾಯಿಸಿ ತಹಶಿಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ತಹಶಿಲ್ದಾರ್ ಮಂಜುನಾಥ್ ಮನವಿ ಸ್ವೀಕರಿಸಿದರು.

ಸುಳ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದಿವಾಕರ ಪೈ ಅವರು ಬ್ಯಾಲೆಟ್ ಪೇಪರ್ ಹೆಚ್ಚು ಪಾರದರ್ಶಕತೆಯಿಂದ ಕೂಡಿರುತ್ತದೆ.ಆದ್ದರಿಂದ ಚುನಾವಣೆ ಪಾರದರ್ಶಕತೆಗಾಗಿ ಬ್ಯಾಲೆಟ್ ಪೇಪರ್ ಬಳಕೆಯಾಗಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಪ್ರಮುಖರಾದ ಅಶೋಕ್ ಎಡಮಲೆ, ಕೆ.ಪಿ. ಜಾನಿ, ಮಾಧವ ಗೌಡ ಸುಳ್ಯಕೋಡಿ, ವಸಂತ ಗೌಡ ಪೆಲ್ತಡ್ಕ, ಮಹಮ್ಮದ್ ಕುಂಞಿ ಗೂನಡ್ಕ, ನ.ಪಂ.ಸದಸ್ಯರಾದ ಕೆ.ಎಸ್.ಉಮ್ಮರ್, ಎಂ.ವೆಂಕಪ್ಪ ಗೌಡ, ಪ್ರಮುಖರಾದ ಗೀತಾ ಕೋಲ್ಚಾರ್, ಮೀನಾಕ್ಷಿ, ಸಿದ್ದಿಕ್ ಕಟ್ಟೆಕಾರ್, ಸಿದ್ದಿಕ್ ಗೂನಡ್ಕ, ಮಂಜುನಾಥ ಮಡ್ತಿಲ, ರಶೀದ್ ಜಟ್ಟಿಪಳ್ಳ, ಸತ್ಯಕುಮಾರ್ ಆಡಿಂಜ ಮತ್ತಿತರರು ಉಪಸ್ಥಿತರಿದ್ದರು.









