ಸುಳ್ಯ:ಎಣ್ಮೂರು-ಐವತ್ತೊಕ್ಲು ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್ ದರ್ಗಾ ಶರೀಫ್ನಲ್ಲಿ ಇತಿಹಾಸ ಪ್ರಸಿದ್ಧ ಎಣ್ಮೂರು ಮಖಾಂ ಉರೂಸ್ ಜ.15ರಿಂದ 17ರವರೆಗೆ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಉರೂಸ್ ಸಮಿತಿ ಹಾಗೂ ಜುಮಾ ಮಸೀದಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಮಡ್ಕ ಸುಮಾರು 300 ವರ್ಷಗಳ ಇತಿಹಾಸವನ್ನು ಹೊಂದಿರುವ ಧಾರ್ಮಿಕ ಶ್ರದ್ದಾಕೇಂದ್ರವಾಗಿರುವ
ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್ ದರ್ಗಾ ಶರೀಫ್ನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ವಲಿಯುತ್ತಾಲ್ಲಾಹಿ ಮಶ್ಹೂರತ್ ಬೀಬಿ ಅವರ ಮಖಾಂ ಹಲವಾರು ಪವಾಡಗಳಿಗೆ ಪ್ರಸಿದ್ದಿಯನ್ನು ಪಡೆದಿದೆ. ಜಾತಿ ಮತ ಭೇಧವಿಲ್ಲದೆ ಇಲ್ಲಿಗೆ ಹರಕೆ ಹೊತ್ತು ಬರುವ ಎಲ್ಲಾ ಧರ್ಮದವರ ಹರಕೆಗಳು ಸಕಾರಗೊಂಡಂತಹ ಹಲವಾರು ನಿದರ್ಶನಗಳು ಇವೆ. ಎಲ್ಲಾ ಧರ್ಮದವರಿಂದ ಗೌರವಿಸಲ್ಪಡುವ ಎಣ್ಮೂರು ದರ್ಗಾ ಶರೀಫ್ ಸಾಮರಸ್ಯದ ಕೇಂದ್ರವೂ ಆಗಿದೆ.ಪ್ರತೀ ಮೂರು ವರುಷಗಳಿಗೊಮ್ಮೆ ಎಣ್ಣೂರು ಮಖಾಂ ಉರೂಸ್ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದ್ದು, ಕಜೆ, ನಿಂತಿಕಲ್ಲು, ನೆಕ್ಕಿಲ, ಕರಿಂಬಿಲ, ಅಲೆಕ್ಕಾಡಿ, ಇಂದ್ರಾಜೆ ಜಮಾಅತ್ಗಳ ಸಹಕಾರದೊಂದಿಗೆ ಎಣ್ಮೂರು ಮಖಾಂ ಉರೂಸ್ ನಡೆಯಲಿದೆ ಎಂದು ವಿವರಿಸಿದರು.
ಜ.15ರಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಧ್ವಜಾರೋಹಣವನ್ನು ಮಹಮ್ಮದ್ ಹನೀಫ್ ಐವತ್ತೊಕ್ಲು ನೆರವೇರಿಸಲಿದ್ದಾರೆ.ಮಗ್ರಿಬ್ ನಮಾಝಿನ ನಂತರ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅಸ್ಸಯ್ಯದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ದುಗಲಡ್ಕ ಅವರು ದುವಾಶೀರ್ವಚನ ನೀಡಲಿದ್ದಾರೆ. ಎಣ್ಮೂರು ಖತೀಬರಾದ ಅಲ್ ಹಾಜ್ ಅಬ್ದುಲ್ಲಾ ಮದನಿಯವರು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಪ್ರಖ್ಯಾತ ವಾಗ್ಮಿ ಮುಹಮ್ಮದ್ ಇರ್ಷಾದ್ ಅಝ್ಹರಿ ಮಲಪ್ಪುರಂ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಜ.16ರಂದು ಜುಮಾ ನಮಾಝಿನ ಬಳಿಕ ಪಳ್ಳಿ ನೇರ್ಚೆ ನಡೆಯಲಿದೆ.
ರಾತ್ರಿ 7ಕ್ಕೆ ನಡೆಯುವ ಸಮಾರಂಭದಲ್ಲಿ
ಮುಖ್ಯ ಪ್ರಭಾಷಣಗಾರರಾಗಿ ಅನ್ವರ್ ಅಲಿ ಹುದವಿ ಪುಲಿಯಕ್ಕೋಡು ಇವರು ಆಗಮಿಸಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಜ.17ರಂದು ಸಂಜೆ 3ರಿಂದ ಬೃಹತ್ ಉಮರಾ ಸಮಾವೇಶ ನಡೆಯಲಿದೆ. ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಹಾಜಿ ವೈ.ಎಂ.ಕೆ. ಅಬ್ದುಲ್ಲ ಕುಂಞಿ ಯೆನೆಪೋಯ ಸಭಾಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಸಚಿವರಾದ ರಹೀಂ ಖಾನ್, ರಾಜ್ಯ ಸರ್ಕಾರದ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಫೂರ್ ಹಾಗೂ ಇತರ ರಾಜಕೀಯ,ಸಾಮಾಜಿಕ ಹಾಗೂ ಶೈಕ್ಷಣಿಕ ನಾಯಕರುಗಳು ಭಾಗವಹಿಸಲಿದ್ದಾರೆ.
ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಗ್ರಿಬ್ ನಮಾಝಿನ ನಂತರ ನಡೆಯಲಿದ್ದು ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಎಣ್ಮೂರು-ಮುಚ್ಚಿಲ ಇವರು ದುವಾಶೀರ್ವಚನ ನೀಡಲಿದ್ದಾರೆ. ಖ್ಯಾತ ವಾಗ್ಮಿ ಮುಹಮ್ಮದಲಿ ಸಖಾಫಿ ಮುಳ್ಳೂರುಕರ ಮುಖ್ಯ ಪ್ರಭಾಷಣ ನೀಡಲಿದ್ದಾರೆ ಎಂದು ಅವರು ವಿವರಿಸಿದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜಾತಿಧರ್ಮಬೇಧವಿಲ್ಲದೆ ಎಲ್ಲರೂ ಸಕ್ರೀಯವಾಗಿ ಭಾಗವಹಿಸುತ್ತಾರೆ ಎಂದು ಅಬ್ದುಲ್ ಗಫೂರ್ ಕಲ್ಮಡ್ಕ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಣ್ಮೂರು-ಐವತ್ತೊಕ್ಕು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸ್ಜಿದ್ನ ಅಧ್ಯಕ್ಷ ಕೆ.ಎಂ. ಇಸ್ಮಾಯಿಲ್ ಪಡ್ಪಿನಂಗಡಿ,ಉರೂಸ್ ಸಮಿತಿ ಉಪಾಧ್ಯಕ್ಷ ಟಿ.ಎಸ್.ಅಬ್ದುಲ್ ಖಾದರ್, ಪ್ರಚಾರ ಸಮಿತಿ ಸಂಚಾಲಕ ಟಿ.ಎಸ್. ರಫೀಕ್, ಉರೂಸ್ ಸಮಿತಿ ಸದಸ್ಯ ರಫೀಕ್ ಐವತ್ತೊಕ್ಲು ಉಪಸ್ಥಿತರಿದ್ದರು.












