ಲೀಡ್ಸ್: ಆಸ್ಟ್ರೇಲಿಯಾ ವಿರುದ್ಧ ನಡೆದ ಆ್ಯಷಸ್ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬೆನ್ ಸ್ಟೋಕ್ಸ್ ಬಳಗ, ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಆಂಗ್ಲರ ಪಡೆ ಸೋಲಿನ ಮುಖಭಂಗಕ್ಕೆ ಒಳಗಾಗಿತ್ತು. ಇದೀಗ ಸರಣಿ ಜೀವಂತವಾಗಿರಿಸಿಕೊಂಡಿದೆ.ಕೊನೆಯ ಹಂತದ ವರೆಗೂ ರೋಚಕವಾಗಿ ಸಾಗಿದ ಪಂದ್ಯದ ನಾಲ್ಕನೇ
ದಿನದಲ್ಲಿ 250 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಏಳು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಮಾರ್ಕ್ ವುಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಒಂದು ಹಂತದಲ್ಲಿ ಆರು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದ್ದ ಇಂಗ್ಲೆಂಡ್ ಸಂಕಷ್ಟಕ್ಕೆ ಒಳಗಾಗಿತ್ತು. ಆದರೆ ಕ್ರಿಸ್ ವೋಕ್ಸ್ ಜೊತೆ ಏಳನೇ ವಿಕೆಟ್ಗೆ 59 ರನ್ಗಳ ಜೊತೆಯಾಟ ಕಟ್ಟಿದ ಹ್ಯಾರಿ ಬ್ರೂಕ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 75 ರನ್ ಗಳಿಸಿದ ಬ್ರೂಕ್ ಇಂಗ್ಲೆಂಡ್ಗೆ ಸ್ಮರಣೀಯ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.ವೋಕ್ಸ್ (32), ಮಾರ್ಕ್ ವುಡ್ (16), ಜ್ಯಾಕ್ ಕ್ರಾವ್ಲಿ (44) ಸಹ ಉಪಯುಕ್ತ ಕಾಣಿಕೆ ನೀಡಿದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಐದು ವಿಕೆಟ್ ಕಬಳಿಸಿದರು. ಮಿಚೆಲ್ ಮಾರ್ಷ್ ಶತಕದ ಬೆಂಬಲದೊಂದಿಗೆ ಆಸೀಸ್ ಮೊದಲ ಇನಿಂಗ್ಸ್ನಲ್ಲಿ 263 ರನ್ ಗಳಿಸಿತು. ಇಂಗ್ಲೆಂಡ್ ಪರ ಮಾರ್ಕ್ ವುಡ್ ಐದು ವಿಕೆಟ್ ಗಳಿಸಿದರು. ಬಳಿಕ ಕಮಿನ್ಸ್ (91ಕ್ಕೆ 6 ವಿಕೆಟ್) ದಾಳಿಗೆ ಸಿಲುಕಿದ ಇಂಗ್ಲೆಂಡ್ 237 ರನ್ನಿಗೆ ಆಲೌಟ್ ಆಯಿತು. ನಾಯಕ ಸ್ಟೋಕ್ಸ್ ಗರಿಷ್ಠ 80 ರನ್ ಗಳಿಸಿದರು. ವೋಕ್ಸ್ ಹಾಗೂ ಕ್ರಿಸ್ ಬ್ರಾಡ್ (ತಲಾ 3 ವಿಕೆಟ್) ದಾಳಿಗೆ ನಲುಗಿದ ಆಸೀಸ್, ದ್ವಿತೀಯ ಇನಿಂಗ್ಸ್ನಲ್ಲಿ ಟ್ರಾವಿಸ್ ಹೆಡ್ ಅರ್ಧಶತಕದ (77) ಹೊರತಾಗಿಯೂ 224 ರನ್ನಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.