ಸೇಂಟ್ ಲೂಸಿಯಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಸೂಪರ್ ಎಂಟರ ಪಂದ್ಯದಲ್ಲಿ ಆತಿಥೇಯ ವೆಸ್ಟ್ಇಂಡೀಸ್ ವಿರುದ್ಧ ಹಾಲಿ ಚಾಂಪಿಯನ್ ಇಂಗ್ಲೆಂಡ್ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಸೂಪರ್ ಎಂಟರ ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ ನಾಲ್ಕು ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು.ನಾಯಕ
ರೋವ್ಮನ್ ಪೊವೆಲ್ (36 ರನ್, 17 ಎಸೆತ, 5 ಸಿಕ್ಸರ್), ನಿಕೋಲಸ್ ಪೂರನ್ (36 ರನ್), ಜಾನ್ಸನ್ ಚಾರ್ಲ್ಸ್ (38 ರನ್) ಹಾಗೂ ಶೆರ್ಫಾನೆ ರುಥರ್ಫಾರ್ಡ್ (ಅಜೇಯ 28) ಉಪಯುಕ್ತ ಇನಿಂಗ್ಸ್ ಕಟ್ಟಿದರು.ಬೃಹತ್ ಗುರಿ ಬೆನ್ನಟ್ಟಿದ ಆಂಗ್ಲರ ಪಡೆ 17.3 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು.
ಬಿರುಸಿನ ಆಟವಾಡಿದ ಆರಂಭಿಕ ಪಿಲಿಪ್ ಸಾಲ್ಟ್ ಅಜೇಯ 87 ರನ್ ಗಳಿಸಿದರು. 47 ಎಸೆತಗಳನ್ನು ಎದುರಿಸಿದ ಸಾಲ್ಟ್, ಐದು ಸಿಕ್ಸರ್ ಹಾಗೂ ಏಳು ಬೌಂಡರಿಗಳನ್ನು ಸಿಡಿಸಿದರು.ಅಲ್ಲದೆ ಮುರಿಯದ ಮೂರನೇ ವಿಕೆಟ್ಗೆ ಜಾನಿ ಬೆಸ್ಟೊ ಅವರೊಂದಿಗೆ 97 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು. ಬೆಸ್ಟೊ 26 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಅಜೇಯ 48 ರನ್ ಗಳಿಸಿದರು.ನಾಯಕ ಜೋಸ್ ಬಟ್ಲರ್ 25 ಹಾಗೂ ಮೊಯಿನ್ ಅಲಿ 13 ರನ್ ಗಳಿಸಿದರು.