ಮೆಲ್ಬರ್ನ್: ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ನಾಲ್ಕನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ನಾಲ್ಕು ವಿಕೆಟ್ಗಳ ಅಂತರದಿಂದ ಜಯಶಾಲಿಯಾಯಿತು. ಈ ಮೂಲಕ ಆಸ್ಟ್ರೇಲಿಯ ನೆಲದಲ್ಲಿ 15 ವರ್ಷಗಳ ನಂತರ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಜಯಿಸಿದೆ.ಈ ಪಂದ್ಯವು ಎರಡೇ ದಿನದೊಳಗೆ ಅಂತ್ಯಗೊಂಡಿದ್ದು, ಈ ಗೆಲುವಿನ ಮೂಲಕ
ಪ್ರವಾಸಿ ತಂಡವು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದೆ.
ಮೊದಲ ದಿನದಾಟವಾದ ಶುಕ್ರವಾರ 20 ವಿಕೆಟ್ಗಳು ಪತನಗೊಂಡಿದ್ದವು. ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯ ತಂಡವನ್ನು ಎರಡನೇ ಇನಿಂಗ್ಸ್ ನಲ್ಲಿ ಕೇವಲ 132 ರನ್ಗೆ ನಿಯಂತ್ರಿಸಿದ ಇಂಗ್ಲೆಂಡ್ ತಂಡವು ಗೆಲುವಿಗೆ 175 ರನ್ ಗುರಿ ಪಡೆಯಿತು. ಇಂಗ್ಲೆಂಡ್ ತಂಡವು ರನ್ ಚೇಸ್ ವೇಳೆ ಆರು ವಿಕೆಟ್ಗಳನ್ನು ಕಳೆದುಕೊಂಡಿದ್ದರೂ ಹ್ಯಾರಿ ಬ್ರೂಕ್(ಔಟಾಗದೆ 18)ಹಾಗೂ ಜಮೀ ಸ್ಮಿತ್(ಔಟಾಗದೆ 3) ನೆರವಿನಿಂದ ಗೆಲುವಿನ ನಗೆ ಬೀರಿತು. ಜೇಕಬ್ ಬೆಥೆಲ್ 40 ರನ್ ಹಾಗೂ ಝ್ಯಿಕ್ ಕ್ರಾಲಿ 37 ರನ್ ಕಲೆ ಹಾಕಿ ಗೆಲುವಿಗೆ ಕೊಡುಗೆ ನೀಡಿದರು.
ಇಂಗ್ಲೆಂಡ್ ತಂಡವು 2011ರ ಜನವರಿಯ ನಂತರ ಮೊದಲ ಬಾರಿ ಆಸ್ಟ್ರೇಲಿಯದಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿದೆ. 2011ರಲ್ಲಿ ಸಿಡ್ನಿಯಲ್ಲಿ ಕೊನೆಯ ಬಾರಿ ಜಯ ಗಳಿಸಿತ್ತು. ಆ ನಂತರ ಆಸ್ಟ್ರೇಲಿಯದಲ್ಲಿ 18 ಪಂದ್ಯಗಳನ್ನಾಡಿರುವ ಇಂಗ್ಲೆಂಡ್ ತಂಡವು 16 ಸೋಲು ಹಾಗೂ 2 ಡ್ರಾ ಸಾಧಿಸಿ ಗೆಲುವಿನ ಬರ ಎದುರಿಸುತ್ತಿತ್ತು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್: 152 ರನ್, ಎರಡನೇ ಇನ್ನಿಂಗ್ಸ್ 132, ಇಂಗ್ಲೆಂಡ್ ಮೊದಲ ಇನ್ನೀಂಗ್ಸ್ 110, ಎರಡನೇ ಇನ್ನಿಂಗ್ಸ್ 178/6.

















