ಕಡಬ: ಕಡಬದಲ್ಲಿ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆಯಾದ ಕಾಡಾನೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿದೆ. ಐದು ಸಾಕಾನೆಗಳ ನೆರವಿನಿಂದ ಅರಣ್ಯ ಇಲಾಖೆ ಮೂರು ದಿನಗಳಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಕೊಂಬಾರು ಮಂಡೆಕರ ಅರಣ್ಯ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಅರಿವಳಿಕೆ

ನೀಡಿ ಪ್ರಜ್ಞೆ ತಪ್ಪಿಸಿದ ಬಳಿಕ ಕಾಡಾನೆಯನ್ನು ಬಂಧಿಸಲಾಯಿತು. ಬಳಿಕ ಸಾಕಾನೆಗಳ ಸಹಕಾರದಲ್ಲಿ ಕಾಡಿನಿಂದ ಹೊರ ತಂದು ಕ್ರೇನ್ ಹಾಗು ಸಾಕಾನೆಗಳ ನೆರವಿನಿಂದ ಸೆರೆ ಹಿಡಿದ ಆನೆಯನ್ನು ಲಾರಿಗೆ ಹತ್ತಿಸಿ ರಾತ್ರಿಯೇ ಮತ್ತಿಗೋಡು ಆನೆ ಶಿಬಿರಕ್ಕೆ ಕರೆದೊಯ್ಯಲಾಯಿತು. ಅಂದಾಜು 40 ವರ್ಷ ಪ್ರಾಯದ ಗಂಡಾನೆಯನ್ನು ಸೆರೆ ಹಿಡಿಯಲಾಗಿದೆ.ಊರಿಗೆ ಬಂದು ಉಪಟಳ ನೀಡಿ, ಜನರನ್ನು ಬಲಿ ತೆಗೆದುಕೊಂಡ ಕಾಡಾನೆಯನ್ನು ಸೆರೆ
ಹಿಡಿಯಲು ಕಡಬ ಭಾಗದಲ್ಲಿ ಅರಣ್ಯ ಇಲಾಖೆ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿತ್ತು. ಅಭಿಮನ್ಯು,ಪ್ರಶಾಂತ್, ಹರ್ಷ,ಕಂಜನ್ ಹಾಗು ಮಹೇಂದ್ರ ಎಂಬ ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್ ನೇತೃತ್ವ ದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಲಾಗಿತ್ತು.
ರೆಂಜಿಲಾಡಿ ಗ್ರಾಮದ ನೈಲ ಸಮೀಪ ಸೋಮವಾರ ಬೆಳಿಗ್ಗೆ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯು ಕಾಡಾನೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿತ್ತು.