ಪೆರಾಜೆ:ಸುಳ್ಯ ಸಮೀಪ ಪೆರಾಜೆ ಬಳಿ ಕಲ್ಚರ್ಪೆಯಲ್ಲಿ ಬಾವಿಗೆ ಬಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯು ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ. ಅಂದಾಜು 20 ವರ್ಷ ಪ್ರಾಯದ ಗಂಡಾನೆಯೊಂದು ಪೆರಾಜೆ ಸಮೀಪ ಕಲ್ಚರ್ಪೆಯಲ್ಲಿ ಬಾವಿಗೆ ಭಾನುವಾರ ರಾತ್ರಿ 11.30ರ ವೇಳೆಗೆ ಬಾವಿಗೆ ಬಿದ್ದಿದೆ.ಕಾಡಿನಿಂದ ನಾಡಿಗೆ ಬಂದ ಆನೆಯು
ಅರಣ್ಯದಂಚಿನ ತೋಟದ ಬದಿಯಲ್ಲಿಯ ಪಾಳು ಬಿದ್ದ ಬಾವಿಗೆ ಆಯ ತಪ್ಪಿ ಬಿದ್ದಿದೆ. ವಿಷಯ ತಿಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಇಂದು ಬೆಳಗ್ಗಿನಿಂದ ಆನೆಯ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸುಮಾರು 5-6 ಗಂಟೆಯ ಕಾರ್ಯಾಚರಣೆಯ ಬಳಿಕ

ಆನೆಯನ್ನು ರಕ್ಷಣೆ ಮಾಡಿ ಕಾಡಿಗೆ ಅಟ್ಟಲಾಗಿದೆ. ಬಾವಿಯ ಒಂದು ಬದಿಯಿಂದ ಹಿಟಾಚಿ ಬಳಸಿ ಆಳ ಮಾಡಿ ದಾರಿ ಮಾಡಿ ಕೊಡಲಾಯಿತು. ಆನೆಯು ಆ ದಾರಿಯ ಮೂಲಕ ಮೇಲಕ್ಕೆ
ಬಂತು. ಘೀಳಿಡುತ್ತಾ ಮೇಲೆ ಬಂದ ಸಲಗ ಕೆಳಕ್ಕೆ ಓಡಿತು. ಆನೆಯು ತೋಟದ ಕೆಳ ಭಾಗಕ್ಕೆ ಓಡಿದ್ದು ಕೆಲ ಕಾಲ ಆತಂಕ ಸೃಷ್ಠಿಸಿತು. ಬಾವಿಯಿಂದ ಮೇಲೆ ಬಂದಾಗ ಎದುರಿಗಿದ್ದ ಹಿಟಾಚಿಗೆ ಹಾದುಕೊಂಡು ಕೆಳ ಭಾಗಕ್ಕೆ ನುಗ್ಗಿತು.ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಆನೆಯನ್ನು

ದೂರಕ್ಕೆ ಸರಿಸಿತು. ಕೆಳ ಭಾಗಕ್ಕೆ ಓಡಿದ ಆನೆ ಕೆಳಭಾಗದಲ್ಲೆಲ್ಲ ಸುತ್ತಾಡಿ ಬಳಿಕ ಹಿಂತಿರುಗಿ ಬಂದು ಪೂಮಲೆ ಕಾಡಿನತ್ತ ಸಾಗಿತ್ತು. ಸುಮಾರು 6 ಗಂಟೆಗಳ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಆನೆಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಿ ಕಾಡಿಗೆ ಬಿಡಲಾಯಿತು.
















