ಮಂಡೆಕೋಲು: ತಾಯಿ ಆನೆಯಿಂದ ಬೇರ್ಪಟ್ಟು ಒಂಟಿಯಾದ ಮರಿ ಆನೆಯನ್ನು ತಾಯಿ ಆನೆಯೊಂದಿಗೆ ಸೇರಿಸಲು ಕಾರ್ಯಾಚರಣೆ ಮುಂದುವರಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವೈದ್ಯರುಗಳು ಬೆಳಗ್ಗಿನಿಂದ ಪ್ರಯತ್ನ ನಡೆಸುತ್ತಿದ್ದಾರೆ.
ಮಂಡೆಕೋಲು ಗ್ರಾಮದ ಕನ್ಯಾನದಲ್ಲಿ ಬೆಳಗ್ಗೆ ಹಿಂಡಿನಿಂದ ಬೇರ್ಪಟ್ಟು ಒಂಟಿಯಾದ
ಮರಿಯಾನೆ ಕಂಡು ಬಂದಿತ್ತು. ಅಂದಾಜು ಎರಡರಿಂದ 3 ತಿಂಗಳು ಪ್ರಾಯದ ಮರಿಯಾನೆ ಆನೆಗಳ ಹಿಂದಿನಿಂದ ಬೇರ್ಪಟ್ಟಿದೆ. ತಾಯಿಯಿಂದ ಬೇರ್ಪಟ್ಟು ಒಂಟಿಯಾದ ಮುದ್ದು ಮರಿಯ ರೋದನ ನೋಡುಗರ ಮನ ಕಲಕುವಂತಿದೆ. ಆದುದರಿಂದಲೇ ಮರಿಯನ್ನು ತಾಯಿಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಹರ ಸಾಹಸ ಪಡುತಿದೆ. ಇಂದು ಬೆಳಿಗ್ಗೆ ಕನ್ಯಾನ ಶಾಲೆಯ ಬಳಿ ತಾಯಿಯಿಂದ ಬೇರ್ಪಟ್ಟು ರೋದಿಸುತ್ತಿದ್ದ ಮರಿ ಆನೆ ಪತ್ರೆಯಾಗಿತ್ತು. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಗಮಿಸಿ ಮರಿಯನ್ನು ಆರೈಕೆ ಮಾಡಿ ತಾಯಿಯೊಂದಿಗೆ ಸೇರಿಸಲು ಕಾರ್ಯಾಚರಣೆ ಆರಂಭಿಸಿದ್ದರು.
ಕಾರ್ಯಾಚರಣೆ ವೇಳೆ ಕನ್ಯಾನ ಭಾಗದಲ್ಲಿ ಕಾಡಿನಲ್ಲಿ ಆನೆಗಳ ಹಿಂಡನ್ನು ಪತ್ತೆ ಹಚ್ಚಲಾಗಿದೆ. ಈ ಹಿಂಡಿನಲ್ಲಿರುವ ತಾಯಿ ಆನೆಯ ಜೊತೆಯಲ್ಲಿ ಮರಿಯನ್ನು ಸೇರಿಸಲು ಪ್ರಯತ್ನ ಮುಂದುವರಿಸಲಾಗಿದೆ. ವನ್ಯಜೀವಿ ವಿಭಾಗದ ವನ್ಯಜೀವಿ ಚಿಕಿತ್ಸಾ ತಜ್ಞರಾದ ಡಾ.ಯಶಸ್ವಿ, ಸುಳ್ಯ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ನಿತಿನ್ ಪ್ರಭು ಮತ್ತಿತರರು ಆನೆ ಮರಿಯನ್ನು ಆರೈಕೆ ಮಾಡಿದ್ದಾರೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಂಡೆಕೋಲು ವ್ಯಾಪ್ತಿಯಲ್ಲಿ ಕಾಡಾನೆಗಳ ಗುಂಪು ನಿರಂತರವಾಗಿ ಸಂಚಾರ ನಡೆಸುತಿದ್ದು, ಇಂದು ಬೆಳಗ್ಗೆ ಕನ್ಯಾನ ಶಾಲೆಯ ಪಕ್ಕದಲ್ಲಿ ಗುಂಪಿನಿಂದ ಬೇರ್ಪಟ್ಟ ಮರಿಯಾನೆ ಕಂಡು ಬಂದಿದೆ. ಕೆಲವು ತಿಂಗಳ ಹಿಂದೆಯೂ ಕಾಡಾನೆ ಮರಿಯೊಂದು ತಾಯಿ ಆನೆಯಿಂದ ಬೇರ್ಪಟ್ಟ ಘಟನೆ ನಡೆದಿತ್ತು.







