ಕಲ್ಲಪಳ್ಳಿ:ಗಡಿಪ್ರದೇಶವಾದ ಕಲ್ಲಪಳ್ಳಿ ಭಾಗದಲ್ಲಿ ಸುಮಾರು ಒಂದು ವಾರದಿಂದ ಕಾಡಾನೆ ಹಿಂಡು ಜನ ವಸತಿ ಪ್ರದೇಶದಲ್ಲಿಯೇ ಬೀಡು ಬಿಟ್ಟು ಭೀತಿ ಹುಟ್ಟಿಸಿದೆ. ಆನೆಗಳ ಪತ್ತೆಗೆ ಡ್ರೋನ್ ಬಳಸಿ ಕಾರ್ಯಾಚರಣೆ ನಡೆಸುವುದರ ಜೊತೆಗೆ ಆನೆ ಕಾಡಿಗೆ ಅಟ್ಟುವ
ರಾಪಿಡ್ ರೆಸ್ಪಾನ್ಸ್ ತಂಡ ಕೂಡ ಆಗಮಿಸಿ ಕಾರ್ಯಾಚರಣೆ ನಡೆಸಿತು. ಕಲ್ಲಪಳ್ಳಿಯ ವೆಳ್ಳಂಬಾಡಿ ಪ್ರದೇಶದಲ್ಲಿ ಜನವಸತಿ ಪ್ರದೇಶ ಸಮೀಪ, ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯ ಸಮೀಪದಲ್ಲಿಯೇ
ಎಂಟರಿಂದ ಒಂಭತ್ತು ಆನೆಗಳ ಹಿಂಡು ಜು.14ರಿಂದ ಬೀಡು ಬಿಟ್ಟಿತ್ತು. ಇದರಿಂದ ಸ್ಥಳೀಯರಲ್ಲಿ ಮತ್ತು ವಾಹನ ಸವಾರರಲ್ಲಿ ಆತಂಕ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ರಾಪಿಡ್ ರೆಸ್ಪಾನ್ಸ್ ಟೀಂ ಆಗಮಿಸಿ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ತಂಡಕ್ಕೆ ಆನೆಗಳು ಪತ್ತೆಯಾಗಿತ್ತು. ಬಳಿಕ ಆನೆಗಳ ಚಲನ ವಲನ ಪತ್ತೆ ಮಾಡಲು ಕಾಸರಗೋಡು ಡಿಎಫ್ಒ ಕಚೇರಿಯಿಂದ ಡ್ರೋನ್ ತಂಡ ಆಗಮಿಸಿ ಕಾರ್ಯಾಚರಣೆ ಕೈಗೊಂಡಿತು. ಶನಿವಾರ ರಾತ್ರಿ ತನಕ
ಸುಮಾರು 4 ಕಿ.ಮಿ. ವ್ಯಾಪ್ತಿಯಲ್ಲಿ ಡ್ರೋನ್ ಕ್ಯಾಮರಾ ಹುಡುಕಾಟ ನಡೆಸಿದೆ. ವೆಳ್ಳಂಬಾಡಿ, ಪಾಡಿಕೊಚ್ಚಿ ಪ್ರದೇಶದ ವ್ಯಾಪ್ತಿಯಲ್ಲಿ ಡ್ರೋನ್ ಕ್ಯಾಮರ ಹುಡುಕಾಟ ನಡೆಸಿದರೂ ಆನೆಗಳ ಚಲನ ವಲನ ಪತ್ತೆಯಾಗಲಿಲ್ಲ.ಬಿಎಫ್ಒ ಪ್ರಸನ್ನ, ಅರಣ್ಯ ಇಲಾಖೆಯ ಶೇಷಪ್ಪ, ಅಭಿಲಾಶ್ ಹಾಗು ತಂಡ ಕಾರ್ಯಾಚರಣೆ ನಡೆಸಿತು. ಪನತ್ತಡಿ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕಲ್ಲಪಳ್ಳಿ, ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ, ಜಾರ್ಜ್ ಪಿ ವಿ ಹಾಗು
ಊರಿನ ಹಿರಿಯರು , ಸಾರ್ವಜನಿಕರು ಉಪಸ್ಥಿತರಿದ್ದರು.
ತಡರಾತ್ರಿ 1 ಗಂಟೆವರೆಗೆ ಕಾರ್ಯಾಚರಣೆ ನಡೆಸಿದರೂ ಆನೆಗಳ ಚಲನ ವಲನ ಪತ್ತೆಯಾಗದ ಹಿನ್ನಲೆಯಲ್ಲಿ ಆನೆಗಳು ದೂರ ಸರಿದಿರುವ ಸಾಧ್ಯತೆ ಇದೆ ಎಂದು ರಾಧಾಕೃಷ್ಣ ಕಲ್ಲಪಳ್ಳಿ ಅವರು ‘ಸುಳ್ಯ ಮಿರರ್’ಗೆ ತಿಳಿಸಿದ್ದಾರೆ.