ಬೆಳಗಾವಿ:ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮಿತಿ ಮೀರಿರುವ ಕಾಡಾನೆ ಹಾವಳಿ ಬಗ್ಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸರಕಾರದ ಗಮನ ಸೆಳೆದಿದ್ದಾರೆ. ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸುಳ್ಯ ಮತ್ತು ಕಡಬ ತಾಲ್ಲೂಕಿನಲ್ಲಿ ಹೆಚ್ಚಿನ ಜನರು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದು, ಜೀವನ ನಿರ್ವಹಣೆಗೆ ಕೃಷಿಯನ್ನೇ ಮೂಲ ಕಸುಬನ್ನಾಗಿ ಅವಲಂಬಿಸಿದ್ದು, ಆದರೇ ಇತ್ತೀಚಿನ ದಿನಗಳಲ್ಲಿ ಆನೆಗಳು ಕೃಷಿ ಜಮೀನುಗಳಿಗೆ ನುಗ್ಗಿ ಕೃಷಿಯನ್ನೆಲ್ಲ ನಾಶಪಡಿಸಿ ಆಸ್ತಿ ಹಾನಿ ಹಾಗೂ
ಜೀವ ಹಾని ಉಂಟು ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದರೆ ಅದಕ್ಕೆ ಏನು ಪರಿಹಾರ ಕಂಡು ಕೊಳ್ಳಲಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಸರಕಾರ ಕಾಡಾನೆ ಹಾವಳಿಯ ಬಗ್ಗೆ ಸರಕಾರದ ಗಮನಕ್ಕೆ ಬಂದಿದೆ. ಆನೆಗಳು ಕೃಷಿ ಜಮೀನುಗಳಿಗೆ ನುಗ್ಗಿ, ಬೆಳೆನಾಶಪಡಿಸಿ ಆಸ್ತಿ ಹಾನಿ ಮಾಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಣ ಹಾನಿ, ಆಸ್ತಿ-ಪಾಸ್ತಿ ನಷ್ಟಕ್ಕೆ ಪರಿಹಾರಧನವನ್ನು ನೀಡಲಾಗುತ್ತಿದೆ. ಕಡಬ ಮತ್ತು ಸುಳ್ಯ ತಾಲೂಕಿನಲ್ಲಿ ಮಾನವ-ಕಾಡಾನೆ ನಡುವಿನ ಸಂಘರ್ಷ ತಪ್ಪಿಸಲು ಸರ್ಕಾರ ಹಲವು ಮಾರ್ಗೋಪಾಯಗಳನ್ನು ಸೂಚಿಸಿದೆ.
ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಜನ ಸಂಪರ್ಕ ಸಭೆಯನ್ನು ಕರೆದು ಜನರಲ್ಲಿ ಅರಿವು ಮೂಡಿಸುವುದು, ರೈತರಿಗೆ ಸಬ್ಸಿಡಿ ದರದಲ್ಲಿ ಸೋಲಾರ್ ಬೇಲಿ ನಿರ್ಮಾಣ ಮಾಡಲು ಉತ್ತೇಜನ ನೀಡಲಾಗುತ್ತಿದೆ ಹಾಗೂ ಅರಣ್ಯದ ಅಂಚಿನಲ್ಲಿ ಬರುವ ಖಾಸಗಿ ಜಮೀನುಗಳ ಸುತ್ತಾ ಸರಕಾರದ ವತಿಯಿಂದ ದೊರಕುವ ಶೇ. 50 ಸಬ್ಸಿಡಿಯನ್ನು ಬಳಸಿಕೊಂಡು ಕಳೆದ ಮೂರು ವರ್ಷಗಳಲ್ಲಿ 4.08 ಕಿ.ಮೀ. ಸೌರಶಕ್ತಿ ಬೇಲಿಯನ್ನು ನಿರ್ಮಿಸಲಾಗಿದೆ.ವಆನೆ ನಿರೋಧಕ ಕಂದಕ ನಿರ್ಮಾಣ, ಸೋಲಾರ್ ತಂತಿಬೇಲಿ ನಿರ್ಮಾಣ, ಟೆಂಟಕಲ್ ಫೆನ್ಸಿಂಗ್, ಹಳ್ಳತೊರೆಗಳು ಬರುವಲ್ಲಿ ವಿಶೇಷ ವಿನ್ಯಾಸದ ಕಾಂಕ್ರಿಟ್ ರಚನೆ ಮಾಡಲಾಗಿರುತ್ತದೆ. ಹಾಗೂ ಕೃಷಿ ಭೂಮಿಗೆ ಬಂದಂತಹ ಕಾಡಾನೆಯನ್ನು ಹಿಮ್ಮೆಟ್ಟಿಸಲು ಅರಣ್ಯ ರಕ್ಷಣಾ ಶಿಬಿರ ಮತ್ತು ವನ್ಯಪ್ರಾಣಿ ಹಿಮ್ಮೆಟ್ಟಿಸುವ ತಂಡಗಳಿಂದ ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ನಿರ್ವಹಿಸಲಾಗುತ್ತಿದೆ.
ನಾಗರಹೊಳೆ,ಮಡಿಕೇರಿ ವನ್ಯಜೀವಿ ವಿಭಾಗಗಳಿಂದ ನುರಿತ ಆನೆ ಕಾವಾಡಿಗಳನ್ನು ಮತ್ತು ಪಶು ವೈದ್ಯಾಧಿಕಾರಿಗಳನ್ನು ನಿಯೋಜಿಸಿಕೊಂಡು ನಾಡಿಗೆ ಬಂದ ಕಾಡ್ತಾನೆಯನ್ನು ಕಾಡಿಗೆ ಹಿಮ್ಮೆಟ್ಟಿಸಿರುವ ಕಾರ್ಯಕ್ರಮ ನಡೆಸಲಾಗುತ್ತಿದೆ.ಸಾರ್ವಜನಿಕರಲ್ಲಿ ವನ್ಯಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ಏರ್ಪಡಿಸುವುದು ಸೇರಿ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಶಾಸಕರ ಪ್ರಶ್ನೆಗೆ ಅರಣ್ಯ ಸಚಿವರು ಉತ್ತರ ನೀಡಿದ್ದಾರೆ.









