ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಾಳೆಕೆರೆ ಫಾರೆಸ್ಟ್ನಲ್ಲಿ ಸೋಮವಾರ ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ, ಒಂಟಿ ಸಲಗವೊಂದು ಹೊಟ್ಟೆಗೆ ತಿವಿದಿದ್ದರಿಂದ ಸಾಕಾನೆ ಅರ್ಜುನ ಮೃತಪಟ್ಟ ದಾರುಣ ಘಟನೆ ನಡೆದಿದೆ.ಸೋಮವಾರ ಮಧ್ಯಾಹ್ನ ಬಾಳೆಕೆರೆ ಅರಣ್ಯದಲ್ಲಿ
ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಅರಿವಳಿಕೆ ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಪುಂಡಾನೆಯೊಂದು ದಾಳಿ ಮಾಡಿದೆ. ನಾಲ್ಕು ಸಾಕಾನೆಗಳ ಜೊತೆಗೆ ಅದನ್ನು ಹಿಮ್ಮೆಟ್ಟಿಸಲು ಮಾವುತರು ಪ್ರಯತ್ನಿಸಿದರು.ಮೂರು ಆನೆಗಳು ಹಿಂದೆ ಸರಿದಿದ್ದು, ಸಾಕಾನೆ ಅರ್ಜುನನ ಮೇಲೆ ಕಾಡಾನೆ ದಾಳಿ ನಡೆಸಿದೆ. ದಾಳಿ ತೀವ್ರವಾಗುತ್ತಿದ್ದಂತೆಯೇ ಹೊಟ್ಟೆ ಭಾಗಕ್ಕೆ ತಿವಿದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಸಾಕಾನೆ ಅರ್ಜುನ ಮೃತಪಟ್ಟಿದೆ. 23 ವರ್ಷಗಳಿಂದ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಿದ್ದ ಅರ್ಜುನ ಆನೆ 2012 ರಿಂದ 2019 ರವರೆಗೆ ಒಟ್ಟು 8 ಬಾರಿ ಮೈಸೂರು ದಸರಾ ಉತ್ಸವದ ಅಂಬಾರಿ ಹೊತ್ತಿತ್ತು.















