ನವದೆಹಲಿ:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಸಮೀಕ್ಷೆಯ ಪ್ರಕಾರ, ಮುಂಬರುವ ಹಣಕಾಸು ವರ್ಷದಲ್ಲಿ (2025-26) ಭಾರತದ ಜಿಡಿಪಿ ಬೆಳವಣಿಗೆ ಶೇಕಡ 6.3 ರಿಂದ ಶೇಕಡ 6.8 ಇರಲಿದೆ ಎಂದು ಅಂದಾಜಿಸಲಾಗಿದೆ.ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತೆಯ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಬಜೆಟ್ಗೆ ಮುಂಚಿತವಾಗಿ ಸರ್ಕಾರವು ಪ್ರಸ್ತುತಪಡಿಸುವ ವಾರ್ಷಿಕ ದಾಖಲೆಯಾಗಿದೆ. ದೇಶದ ಆರ್ಥಿಕತೆಯ
ಅಲ್ಪಾವಧಿ ಮತ್ತು ಮಧ್ಯಮ ಅವಧಿಯ ನಿರೀಕ್ಷೆಗಳ ಅವಲೋಕನವನ್ನು ಸಹ ಇದು ಒದಗಿಸುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗದಿಂದ ಈ ವರದಿಯನ್ನು ಸಿದ್ಧಪಡಿಸಲಾಗುತ್ತದೆ.
2024-25ರ ಆರ್ಥಿಕ ಸಮೀಕ್ಷೆಯಂತೆ ಜಾಗತಿಕ ಅನಿಶ್ಚಿತತೆ ನಡುವೆಯೂ, ಪ್ರಸಕ್ತ ಹಣಕಾಸು ವರ್ಷ (2024-25)ದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.4 ರಷ್ಟಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. 2025-26ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.6.3 ರಿಂದ ಶೇ.6.8ರಷ್ಟು ಇರಲಿದೆ ಅಂದಾಜಿಸಲಾಗಿದೆ.
ಭಾರತದ ಆರ್ಥಿಕ ಮೂಲಭೂತ ಅಂಶಗಳು ಸದೃಢವಾಗಿವೆ
ಜಾಗತಿಕ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲು ವಿವೇಕಯುತ ನೀತಿ ನಿರ್ವಹಣೆ, ವಿವಿಧ ಕಾರ್ಯತಂತ್ರಗಳು ಮತ್ತು ದೇಶೀಯ ಮೂಲಭೂತ ಅಂಶಗಳನ್ನು ಬಲಪಡಿಸುವ ಅಗತ್ಯವಿದೆ. ಸಾರ್ವಜನಿಕ ಬಂಡವಾಳ ವೆಚ್ಚ ಹಾಗೂ ವಾಣಿಜ್ಯ ಮತ್ತು ವ್ಯಾಪಾರದ ನಿರೀಕ್ಷೆಗಳನ್ನು ಸುಧಾರಿಸುವ ಹೂಡಿಕೆ ಚಟುವಟಿಕೆಗಳು ಹೆಚ್ಚಾಗುವ ನಿರೀಕ್ಷೆ ಇದೆ.ತಳಮಟ್ಟದ ರಚನಾತ್ಮಕ ಸುಧಾರಣೆಗಳ ಮೂಲಕ ಭಾರತವು ತನ್ನ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ಅಗತ್ಯವಿದೆ
ಕಾರ್ಪೊರೇಟ್ ವಲಯವು ಉನ್ನತ ಮಟ್ಟದ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಬೇಕು. ಹವಾಮಾನ ವೈಪರಿತ್ಯದಿಂದಾಗುವ ಬೆಳೆ ಹಾನಿಯನ್ನು ಕಡಿಮೆ ಮಾಡಬೇಕು ಮತ್ತು ಇಳುವರಿಯನ್ನು ಹೆಚ್ಚಿಸಬೇಕು. ಬೇಳೆ ಕಾಳುಗಳು, ಎಣ್ಣೆ ಕಾಳುಗಳು, ಟೊಮೆಟೊ, ಈರುಳ್ಳಿ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಭಾರತ ಎರಡು ದಶಕಗಳವರೆಗೆ ಸರಾಸರಿ ಶೇ. 8ರಷ್ಟು ಬೆಳವಣಿಗೆಯನ್ನು ಹೊಂದಿರಬೇಕು.ದೇಶದ ಬೆಳವಣಿಗೆಗೆ ಪೂರಕವಾಗಿ ಹೂಡಿಕೆ ಪ್ರಮಾಣ ಶೇ.31 ರಿಂದ ಶೇ.35ಕ್ಕೆ ಹೆಚ್ಚಾಗಬೇಕು.
ಸುಧಾರಣೆಗಳು, ಆರ್ಥಿಕ ನೀತಿಗಳ ಗಮನವು ಈಗ ವ್ಯವಸ್ಥಿತವಾಗಿ ನಿಯಂತ್ರಣವನ್ನು ತೆಗೆದುಹಾಕುವುದರ ಮೇಲೆ ಇರಬೇಕು. ಉತ್ಪಾದನಾ ವಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕೃತಕ ಬುದ್ಧಿಮತ್ತೆ (ಎಐ), ರೊಬೊಟಿಕ್ಸ್ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ ಎಂದು ಹೇಳಿದೆ