ಹೊಸದಿಲ್ಲಿ: ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ಹೊಂದಿದ್ದ ಭೂಕಂಪ ಬುಧವಾರ ನಸುಕಿನಲ್ಲಿ ನೇಪಾಳದಲ್ಲಿ ಸಂಭವಿಸಿದೆ.
ನಸುಕಿನ 1.57 ಗಂಟೆ ಸುಮಾರಿಗೆ ದಿಲ್ಲಿ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಕೂಡಾ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನ
ನೆಲಮಟ್ಟದಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ.ಭೂಕಂಪದ ಕೇಂದ್ರಬಿಂದು ನೇಪಾಳದ ಗಡಿಗೆ ಹೊಂದಿಕೊಂಡಿರುವ ಉತ್ತರಾಖಂಡದ ಪಿತ್ತೋರ್‌ಗಢದಲ್ಲಿತ್ತು ಎಂದು ತಿಳಿದು ಬಂದಿದೆ. ಪ್ರಬಲ ಭೂಕಂಪನದಲ್ಲಿ ನೇಪಾಳದ ದೋಟಿ ಜಿಲ್ಲೆಯಲ್ಲಿ ಮನೆ ಕುಸಿದು 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದೆಹಲಿ, ಗಾಜಿಯಾಬಾದ್,ನೋಯ್ಡಾ, ಗುರುಗ್ರಾಂ, ಲಖನೌ ಸೇರಿ ವಿವಿಧ ಭಾಗಗಳಲ್ಲಿ ಭೂ ಕಂಪನದ ಅನುಭವ ಆಗಿದೆ ಎಂದು ಹೇಳಲಾಗಿದೆ. ನೇಪಾಳದಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ಮಂಗಳವಾರ ಮುಂಜಾನೆ 4.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಹಿಂದಿನ ಭೂಕಂಪ ಕಠ್ಮಂಡುವಿನಿಂದ 155 ಕಿಲೋಮೀಟರ್ ಈಶಾನ್ಯಕ್ಕೆ 100 ಕಿಲೋಮೀಟರ್ ಆಳದಲ್ಲಿ ಸಂಭವಿಸಿತ್ತು.