ಸುಳ್ಯ:ಜಟ್ಟಿಪಳ್ಳ ಕೊಡಿಯಾಲಬೈಲ್ ದುಗಲಡ್ಕ ರಸ್ತೆಯ ಅಭಿವೃದ್ಧಿಗೆ ಈಗಾಗಲೇ 50 ಲಕ್ಷ ರೂಗಳ ಕಾಮಗಾರಿ ನಡೆದಿದ್ದು ವಿವಿಧ ಮೂಲಗಳಿಂದ ಇನ್ನೂ 65 ಲಕ್ಷ ರೂಗಳ ಕಾಮಗಾರಿಗಳಿಗೆ ಮಂಜೂರಾಗಿದ್ದು ಶೀಘ್ರದಲ್ಲಿಯೇ ಈ ಕಾಮಗಾರಿಯು ಆರಂಭಗೊಳ್ಳಲಿದೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ. ಮಳೆ ಹಾನಿ ದುರಸ್ತಿ
ಯೋಜನೆಯಲ್ಲಿ 25 ಲಕ್ಷ ರೂ, ಲೋಕೋಪಯೋಗಿ ಇಲಾಖೆಯಿಂದ 25 ಲಕ್ಷ ರೂ ಮಂಜುರಾಗಿದ್ದು ಈ ಎರಡು ಕಾಮಗಾರಿಗಳು ಶೀಘ್ರವೇ ಆರಂಭಗೊಳ್ಳಲಿದೆ. ಇದಲ್ಲದೆ ಸರಕಾರಿ ಕಾಲೇಜಿನಿಂದ ಮುಖ್ಯರಸ್ತೆಯ ತನಕ 15 ಲಕ್ಷ ರೂಗಳ ಅಂದಾಜು ವೆಚ್ಚದಲ್ಲಿ ಹಾನಿಯಾದ ರಸ್ತೆಗೆ ನಗರ ಪಂಚಾಯತಿ ವತಿಯಿಂದ ಮರುಡಾಮರೀಕರಣ ನಡೆಸಲಾಗುವುದು. ನಾಯಕರು ಕೊಟ್ಟ ಭರವಸೆಯಂತೆ ಈ ರಸ್ತೆಗೆ ಈ ಮೊದಲು 50 ಲಕ್ಷ ರು ಹಾಗೂ ಇದೀಗ 65 ಲಕ್ಷ ರೂ, ಒಟ್ಟು 1.15 ಕೋಟಿ ರೂಗಳ ಕಾಮಗಾರಿಯು ಈ ವರ್ಷ ನಡೆಯುತ್ತಿದೆ. ಸಂಪೂರ್ಣ ಎಂಟು ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿ ಮಾಡುವವರೇ ನಾವು ಬದ್ಧರಾಗಿದ್ದು ವಿವಿಧ ರೀತಿಯಲ್ಲಿ ಅನುದಾನಕ್ಕೆ ಪ್ರಯತ್ನಿಸಲಾಗುತ್ತಿದೆ. ಹಾಗಾಗಿ ಈ ಭಾಗದ ಜನತೆ ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.