ಸುಳ್ಯ:ಕರ್ನಾಟಕ ರಾಜ್ಯ ಮೊಗೇರ ಸಂಘದ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಮೊಗೇರ ಸಂಘದ ವತಿಯಿಂದ 2 ದಿವಸಗಳ ಕಾಲ ನಡೆಯುವ ಬೃಹತ್ ಸಮಾವೇಶ ‘ಮೊಗೇರ ‘ದುಡಿ ಆಯನ 2026’ಕ್ಕೆ ಸಂಭ್ರಮದ ಚಾಲನೆ ದೊರೆತಿದೆ.ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ಫೆ.28 ಮತ್ತು ಮಾ.1ರಂದು ನಡೆಯುವ ಕಾರ್ಯಕ್ರಮವನ್ನು
ಮೊಗೇರ ಸಂಘದ ಸ್ಥಾಪಕ ಸದಸ್ಯ ಶುಭೋದಯ ಕೂಡ್ಲು ಉದ್ಘಾಟಿಸಿ ಶುಭ ಹಾರೈಸಿದರು.
ದಿಕ್ಸೂಚಿ ಭಾಷಣ ಮಾಡಿದ ಮಂಗಳೂರು ವಿವಿಯ ಎಸ್.ವಿ.ಪಿ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಡಾ. ಅಭಯಕುಮಾರ್ ಮಾತನಾಡಿ ದಕ್ಷಿಣ ಕನ್ನಡ, ಕಾಸರಗೋಡು, ಜಿಲ್ಲೆಗಳಲ್ಲಿ ಮೊಗೇರ ಸಮುದಾಯ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಮೊಗೇರರಿಗೂ ಭೂಮಿಗೂ ನಿಕಟ ಸಂಬಂಧ ಇದ್ದು ಕೃಷಿಯೇ ಮೂಲ ವೃತ್ತಿ. ದುಡಿ ಮೊಗೇರರ ಸಾಂಸ್ಕೃತಿಕ ಪ್ರತೀಕ ಎಂದ ಅವರು ಮೊಗೇರರಲ್ಲಿ ಪ್ರಾದೇಶಿಕವಾದ ಭಿನ್ನತೆ ಇದೆ ಎಂದು

ಹೇಳಿದರು. ಸಮುದಾಯದ ಸಂಸ್ಕೃತಿ, ಅಚರಣೆಗಳ ಬಗ್ಗೆ ಹೆಚ್ಚು ಸಂಶೋಧನೆ ನಡೆಸಿ ಪುಸ್ತಕ ರೂಪಕ್ಕೆ ತರಬೇಕು ಎಂದು ಅವರು ಹೇಳಿದರು.ಪ್ರತಿ ಸಂಘಟನೆಗಳು ಯಶಸ್ವಿಯಾಗಲು ಸಾಮಾಜಿಕ ಮತ್ತು ಧಾರ್ಮಿಕ ಚಕ್ರಗಳು ಇರಬೇಕು, ಯುವ ಜನಾಂಗ ಉತ್ತಮ ಶಿಕ್ಷಣ ಪಡೆದು ಉತ್ತಮ ಉದ್ಯೋಗ ಪಡೆದು ಗೌರವದಲ್ಲಿ ಬದುಕುವಂತಾಗಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕರಾದ ಡಾ.ಮಾಧವ ಪೆರಾಜೆ ಮಾತನಾಡಿ ಹಿರಿಯರ ದೂರದೃಷ್ಠಿಯ ಪರಿಣಾಮದಿಂದ ಸಂಘಟನೆಗಳು ಸ್ಥಾಪನೆಯಾಗಿದೆ. ಸಂಘಟನೆಗಳಿಗೆ ಯಾವಾಗಲು ಶಕ್ತಿ ಇದೆ. ಆದುದರಿಂದಲೇ ಸಂಘಟನೆ ಇಷ್ಟು ದೊಡ್ಡದಾಗಿ ಬೆಳೆದಿದೆ ಎಂದು ಹೇಳಿದರು.ಆಧುನಿಕ ಯುಗದ ಎಐ ತಂತ್ರಜ್ಞಾನಕ್ಕೆ ಅನುಗುಣವಾಗಿ ಯುವ ಜನಾಂಗ ಬೆಳೆಯಬೇಕು ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ನಂದರಾಜ ಸಂಕೇಶ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ನಿವೃತ್ತ ಶಿಕ್ಷಣ ಸಂಯೋಜಕರಾದ ಕೇಶವ ಮಾಸ್ಟರ್ ಹೊಸಗದ್ದೆ ಧ್ವಜಾರೋಹಣ ನೆರವೇರಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶಿವಪ್ಪ.ಬಿ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪಿ.ಎಂ.ರವಿ ಅತಿಥಿಗಳಾಗಿದ್ದರು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತಡ್ಕ ಸ್ವಾಗತಿಸಿದರು. ಮೊಗೇರ ದುಡಿ ಆಯನ 2026 ಸ್ವಾಗತ ಸಮಿತಿಯ ಸಂಚಾಲಕ ಅಶೋಕ್ ಕೊಂಚಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದುಡಿ ಆಯನ 2026 ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ದಾಸ್ ವಂದಿಸಿದರು. ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಪ್ರತಿನಿಧಿಗಳ ಅಧಿವೇಶನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವಾರ್ಪಣೆ, ಸಾಂಸ್ಕೃತಿಕ ವೈವಿಧ್ಯ, ಜನಪದ ಕ್ರೀಡೆ, ವಿವಿಧ ಆಟೋಟಗಳ ಕಾರ್ಯಕ್ರಮಗಳು ನಡೆಯಿತು.








