ಸುಳ್ಯ:ಹೇಳಿ ಕೇಳಿ ಗಲ್ಫ್ ರಾಷ್ಟ್ರಗಳು ಮರುಭೂಮಿ ಪ್ರದೇಶ. ಈ ಮರಳುಗಾಡಿನಲ್ಲಿ ಕಾಡು, ಹಸಿರು ಎಂಬುದು ಮರೀಚಿಕೆ. ಅಲ್ಲಿ ಹಲವು ದೇಶಗಳು ಕಾಡು ಬೆಳೆಸಲು ಪ್ರಯತ್ನ ನಡೆಸಿದ್ದರೂ ಅದು ಫಲಪ್ರದವಾಗಲಿಲ್ಲ. ಅಂತಹಾ ದುಬೈನಲ್ಲಿ ಮರ ಗಿಡ ಬೆಳೆಸಿ ಹಸಿರಾಗಿಸಲು ಅಲ್ಲಿನ ಸರಕಾರ ಹಲವು ಪ್ರಯತ್ನ ನಡೆಸುತ್ತಲೇ ಇದೆ. ಇದರ ಭಾಗವಾಗಿ ದುಬೈನಲ್ಲಿ ಕಾಡು ಬೆಳೆಸಲು ಗ್ರೀನ್ ಹೀರೋ ಆಪ್ ಇಂಡಿಯಾ ಸುಳ್ಯ ಮೂಲದ ಗುಜರಾತ್ನ ಉದ್ಯಮಿ, ಪರಿಸರ ತಜ್ಞ ಡಾ.ಆರ್.ಕೆ.ನಾಯರ್ ಅವರನ್ನು ದುಬೈ ಸರಕಾರ ಆಹ್ವಾನಿಸಿದೆ. ಈ ಹಿನ್ನಲೆಯಲ್ಲಿ
ದುಬೈಯನ್ನು ಹಸಿರಾಗಿಸಲು ಡಾ.ಆರ್.ಕೆ.ನಾಯರ್ ಈ ತಿಂಗಳ ಕೊನೆಯಲ್ಲಿ ದುಬೈಗೆ ಭೇಟಿ ನೀಡಲಿದ್ದಾರೆ. ‘ಮಿಯಾವಾಕಿ’ ಅರಣ್ಯೀಕರಣ ಮಾದರಿಯಲ್ಲಿ ದೇಶದಾದ್ಯಂತ 26 ಲಕ್ಷಕ್ಕೂ ಹೆಚ್ಚು ಅರಣ್ಯ ಬೆಳೆಸಿರುವ ಡಾ.ಆರ್.ಕೆ.ನಾಯರ್
ಭಾರತದ 12 ರಾಜ್ಯದಲ್ಲಿ 116 ಕಾಡುಗಳನ್ನು ನಿರ್ಮಿಸಿದ್ದಾರೆ. ಸಮುದ್ರ ತೀರದಲ್ಲೂ ಅರಣ್ಯ ಬೆಳೆಸಿರುವ ಆರ್ ಕೆ ನಾಯರ್ ಅವರು ಕಚ್ ಪ್ರದೇಶದಲ್ಲಿ ಮರಳಿನಲ್ಲೂ ಅರಣ್ಯ ಬೆಳೆಸಿ ಸ್ಮೃತಿ ವನ ನಿರ್ಮಿಸಿ ಯಶಸ್ಸು ಕಂಡಿದ್ದಾರೆ.ಇತ್ತೀಚೆಗೆ ನಾಸಾದ ತಾಪಮಾನ ನಿಯಂತ್ರಣ ಕುರಿತ ವಿಚಾರ ಸಂಕಿರಣದಲ್ಲಿ ಮಿಯಾವಾಕಿ ಅರಣ್ಯದಿಂದ ತಾಪಮಾನ ನಿಯಂತ್ರಣದ ಬಗ್ಗೆ ಅವರು ಪ್ರಬಂಧ ಮಂಡಿಸಿದ್ದರು.
ಈ ಅಂಶಗಳನ್ನು ಗಮನಿಸಿ ದುಬೈ ಸರಕಾರ ಆರ್ ಕೆ ನಾಯರ್ ಅವರನ್ನು ಸಂಪರ್ಕಿಸಿ ಕಾಡು ಬೆಳೆಸಲು ಕರೆ ನೀಡಿದ್ದಾರೆ. ಈ ತಿಂಗಳ ಕೊನೆಗೆ ದುಬೈ ಭೇಟಿ ನೀಡಿ ಮಾತುಕತೆಯೂ ನಡೆಸಲಿದ್ದಾರೆ.
ಅಲ್ಲಿ ಪ್ರಾಥಮಿಕ ಸಮೀಕ್ಷೆ, ಮಣ್ಣಿನ ಸ್ವಭಾವದ ಕುರಿತು ಅಧ್ಯಯನ ನಡೆಸಲಾಗುವುದು. ದುಬೈನಲ್ಲಿಯೂ ಕಾಡು ಬೆಳೆಸಲು ಸಾಧ್ಯ ಆಗಬಹುದು ಎಂಬ ವಿಶ್ವಾಸ ಇದೆ ಎಂದು ಡಾ.ಆರ್.ಕೆ.ನಾಯರ್ ಹೇಳಿದ್ದಾರೆ.





