ಮಂಗಳೂರು:ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸುತ್ತಿರುವ ವಾರ್ಷಿಕ ರಾಜ್ಯ ಮಟ್ಟದ ‘ವಂದನಾ ಪ್ರಶಸ್ತಿ’ಗೆ ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ ನಾಯರ್ ಆಯ್ಕೆ ಯಾಗಿದ್ದಾರೆ.ಮಾ. 21ರಂದು ಸಂಜೆ ನಗರದ ಲೇಡಿಹಿಲ್ನ
ಹೋಟೆಲ್ ಸೀ ವ್ಯೂನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಸಭಾಪತಿ ಡಾ.ದೇವದಾಸ್ ರೈ ತಿಳಿಸಿದ್ದಾರೆ. 2026ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿರುವ ಹಸಿರು ಕ್ರಾಂತಿಯ ಹರಿಕಾರ ಹಾಗೂ ಪರಿಸರ ತಜ್ಞ ಡಾ.ರಾಧಾಕೃಷ್ಣ ನಾಯರ್ ಅವರು ಭಾರತ ದೇಶದ 12 ರಾಜ್ಯಗಳಲ್ಲಿ ಸಾವಿರಾರು ಎಕರೆ ಬಂಜರು ಭೂಮಿಯನ್ನು ಜಪಾನ್ ಮಾದರಿಯ
ಮಿಯಾವಾಕಿ ಅರಣ್ಯ ಪ್ರದೇಶವಾಗಿ ಪರಿವರ್ತಿಸಿದ್ದನ್ನು ಪರಿಗಣಿಸಿ ಅವರ ಅಮೂಲ್ಯ ಕೊಡುಗೆ ಮತ್ತು ಸಾಧಿಸಿದ ಗಣನೀಯ ಸಾಧನೆಯನ್ನು ಪ್ರಶಂಸಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಶಸ್ತಿ ಪ್ರದಾನ ಮಾಡಲಿರುವರು.ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷರಾದ ಭಾಸ್ಕರ ರೈ ಕಟ್ಟಾ ಅಧ್ಯಕ್ಷತೆ ವಹಿಸಲಿರುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ, ಭಾಸ್ಕರ ರೈ ಕಟ್ಟಾ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ನಿಯೋಜಿತ ಅಧ್ಯಕ್ಷ ರವೀಂದ್ರ, ಪ್ರಮೀಳಾ ಹೆಗ್ಡೆ, ರೋಟರಾಕ್ಟ್ ಮಂಗಳೂರು ಸಿಟಿಯ ಅಧ್ಯಕ್ಷ ಅಕ್ಷಯ್ ಬಿ. ರೈ ಮತ್ತು ಮಾಧ್ಯಮ ಸಲಹೆಗಾರ ಎಂ.ವಿ. ಮಲ್ಯ ಉಪಸ್ಥಿತರಿದ್ದರು.












