ಸುಳ್ಯ:ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಬಲಪಡಿಸುವುದರ ಜೊತೆಗೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಸಣ್ಣ ಭಾಷೆಗಳ ಅಭಿವೃದ್ಧಿಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ. ಸುಳ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ
ಯೋಜನೆಗಳ ಕುರಿತು ವಿವರಿಸಿದರು.ರಾಜ್ಯದಲ್ಲಿ 290 ಭಾಷೆಗಳಿವೆ, ಇವುಗಳ ಪೈಕಿ 10 ಸಾವಿರಕ್ಕೂ ಅಧಿಕ ಮಂದಿ ಮಾತನಾಡುವ 29 ಭಾಷೆಗಳು ಇವೆ. ಈ ಪ್ರಾದೇಶಿಕ ಭಾಷೆಗಳು ಬೆಳೆದರೆ ಕನ್ನಡ ಇನ್ನಷ್ಟು ಬಲಗೊಳ್ಳಲಿದೆ. ಆದುದರಿಂದ ಈ ಭಾಷೆಗಳನ್ನು ಮೂರನೇ ಭಾಷೆಯಾಗಿ ಕಲಿಯಲು ಅವಕಾಶ ನೀಡಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಣ್ಣ ಭಾಷೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತಿದೆ ಎಂದ ಅವರು ಕನ್ನಡದ ಅಭಿವೃದ್ಧಿಗಾಗಿ ಪ್ರಾಧಿಕಾರ ಕೆಲಸ ಮಾಡುತ್ತಿದ್ದು ರಾಜ್ಯದ 26 ಜಿಲ್ಲೆಗಳಿಗೆ ಈಗಾಗಲೇ ಭೇಟಿ ನೀಡಲಾಗಿದೆ.ರಾಜ್ಯದ

19,700 ಶಾಲೆಗಳಿಗೆ ಖಾತಾ ಪತ್ರ ಇರಲಿಲ್ಲ, ಪ್ರಾಧಿಕಾರದ ಪ್ರಯತ್ನದ ಫಲವಾಗಿ 19 ಸಾವಿರಕ್ಕೂ ಅಧಿಕ ಶಾಲೆಗಳಿಗೆ ಖಾತಾ ಪತ್ರ ನೀಡಲು ಸಾಧ್ಯವಾಗಿದೆ. 400ರಷ್ಟು ಶಾಲೆಗಳು ಮಾತ್ರ ಖಾತಾ ಪತ್ರ ನೀಡಲು ಬಾಕಿ ಇದೆ ಎಂದು ಹೇಳಿದರು. ಎಸ್ಎಸ್ಎಲ್ಸಿ ತನಕ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ನಡೆಸಿದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ.5 ಮೀಸಲಾತಿ ಇದೆ, ಇದನ್ನು ಶೇ.10 ಆಗಿ ಹೆಚ್ಚಿಸಬೇಕು ಎಂದು ಶಿಫಾರಸ್ಸು ಮಾಡಲಾಗುವುದು.
ಕರ್ನಾಟಕದ ಸಮನ್ವಯ ಸಂಸ್ಕೃತಿಯ ಕುರಿತು 100 ಪುಸ್ತಕಗಳನ್ನು ರಚಿಸಲಾಗುವುದು ಇದರಲ್ಲಿ 41 ಪುಸ್ತಕಗಳು ಸಿದ್ಧವಾಗಿದೆ. ‘ಲೇಖಕರು ಕಂಡ ಕನ್ನಡ ಲೋಕ’ ಎಂಬ 25 ಪುಸ್ತಕಗಳನ್ನು ರಚಿಸಲು ಯೋಜನೆ ರೂಪಿಸಿದ್ದು 15 ಸಿದ್ಧಗೊಂಡಿದೆ. ಕನ್ನಡದ ಪ್ರಾದೇಶಿಕ ಶಬ್ದಗಳ ನಿಘಂಟು, ‘ಊರಿನ ಹೆಸರು ಉಳಿಯಲಿ ಕನ್ನಡ ಬೆಳೆಯಲಿ ಎಂಬ ಉದ್ದೇಶದಿಂದ ಸ್ಥಳ ನಾಮ ಪದಗಳ ಕೋಶ ರಚಿಸಲಾಗುವುದು.
ಕಾಸರಗೋಡಿನ ಕನ್ನಡ ಭಾಷೆ, ಕನ್ನಡದ ಸಂಸ್ಕೃತಿ ಉಳಿಯಬೇಕು ಎಂಬ ನಿಟ್ಟಿನಲ್ಲಿ ಕಾಸರಗೋಡಿಗೆ ಸಾಂಸ್ಕೃತಿಕ ಸಹಾಯವಾಗಿ ಪ್ರತ್ಯೇಕ ಪ್ಯಾಕೇಜ್ ನೀಡಬೇಕು, ಗಡಿನಾಡಿನಲ್ಲಿ 10ನೇ ತರಗತಿ ತನಕ ಕನ್ನಡದಲ್ಲಿಯೇ ಅಧ್ಯಯನ ನಡೆಸಿದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಇತ್ಯಾದಿ ಪ್ರಸ್ತಾವನೆಗಳನ್ನು ಕರ್ನಾಟಕ ಸರಕಾರಕ್ಕೆ ನೀಡಲಾಗಿದೆ ಎಂದು ಡಾ.ಬಿಳಿಮಲೆ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯ ಚಂದ್ರಶೇಖರ ಶೇಖರ ಪೇರಾಲು, ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಡಾ.ಸುಂದರ ಕೇನಾಜೆ ಉಪಸ್ಥಿತರಿದ್ದರು.









