ಚೆನ್ನೈ:ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ 164 ಅಭ್ಯರ್ಥಿಗಳ ಪಟ್ಟಿಯನ್ನು ಡಿಎಂಕೆ ಬಿಡುಗಡೆ ಮಾಡಿದೆ
ಸಚಿವ ಸಂಪುಟದಲ್ಲಿನ ಮೂವರನ್ನು ಹೊರತುಪಡಿಸಿ ಎಲ್ಲರಿಗೂ ಮತ್ತೆ ಟಿಕೆಟ್ ದೊರೆತಿದೆ. ಬಹುತೇಕ ಸಚಿವರು, ಶಾಸಕರು ಮತ್ತು ಹಿರಿಯ ನಾಯಕರು ಈ ಬಾರಿಯೂ ಟಿಕೆಟ್ ಪಡೆದಿದ್ದಾರೆ. 60 ಮಂದಿ
ಹೊಸಮುಖಗಳಿಗೂ ಡಿಎಂಕೆ ಮಣೆ ಹಾಕಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕೊಲತೂರು ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಮತ್ತು ಉದಯನಿಧಿ ಅವರು ಚೆಪಾಕ್–ಟ್ರಿಪ್ಲಿಕೇನ್ನಿಂದ ಎರಡನೇ ಬಾರಿಗೆ ಸ್ಪರ್ಧಿಸಲಿದ್ದಾರೆ.ಸಚಿವರಾದ ದುರೈ ಮುರುಗನ್(ಡಿಎಂಕೆ ಪ್ರಧಾನ ಕಾರ್ಯದರ್ಶಿ), ಕೆ.ಎನ್ ನೆಹ್ರೂ ಅನ್ಬಿಲ್ ಮಹೇಶ್ ಪೊಯ್ಯಮೊಳಿ, ತಂಗಂ ತೆನ್ನರಸು, ಎಂ.ಎ ಸುಬ್ರಮಣಿಯನ್ ಮತ್ತು ಇ.ವಿ ವೇಲು ಸೇರಿದಂತೆ ಬಹುತೇಕರಿಗೆ ಟಿಕೆಟ್ ದೊರೆತಿದೆ.ಎಐಎಡಿಎಂಕೆಯಿಂದ ಉಚ್ಚಾಟಿತರಾಗಿ ಡಿಎಂಕೆ ಸೇರಿದ್ದ ಒ.ಪನ್ನೀರಸೆಲ್ವಂ ಅವರು ಬೊಡಿನಾಯಕ್ಕನೂರು ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಪನ್ನೀರಸೆಲ್ವಂ ಆಪ್ತರಾದ ಪೌಲ್ ಮನೋಜ್ ಪಾಂಡಿಯನ್ ಮತ್ತು ಆರ್. ವೈತಿಲಿಂಗಂ ಅವರಿಗೂ ಟಿಕೆಟ್ ದೊರಕಿದೆ. ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ ಅವರು ಎಐಎಡಿಎಂಕೆ ಭದ್ರಕೋಟೆಯಾಗಿರುವ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಕಾಂಗ್ರೆಸ್, ಎಡಪಕ್ಷಗಳು, ವಿಸಿಕೆ ಮತ್ತು ಡಿಎಂಡಿಕೆ ಮತ್ತಿತರರನ್ನು ಒಳಗೊಂಡ ಜಾತ್ಯತೀತ ಪ್ರಗತಿಪರ ಮೈತ್ರಿಕೂಟವು(ಎಸ್ಪಿಎ) ಡಿಎಂಕೆ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದೆ. ಮಿತ್ರ ಪಕ್ಷಗಳೊಂದಿಗೆ ಡಿಎಂಕೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್ 28, ಡಿಎಂಡಿಕೆ 10, ವಿಸಿಕೆ 8, ಎಡಪಕ್ಷಗಳು ತಲಾ 5 ಮತ್ತು ಎಂಡಿಎಂಕೆ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.ಡಿಎಂಕೆ 164 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮಿತ್ರ ಪಕ್ಷಗಳ 11 ಅಭ್ಯರ್ಥಿಗಳು ಕೂಡಾ ಡಿಎಂಕೆ ಚಿಹ್ನೆಯಡಿ ಕಣಕ್ಕಿಳಿಯಲಿದ್ದಾರೆ.










