ನವದೆಹಲಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲೆಯ
ವಿವಿಧ ಹೆದ್ದಾರಿ ಯೋಜನೆಗಳ ಕಾಮಗಾರಿ ಪ್ರಗತಿ ಬಗ್ಗೆ ಸಂಸದರು ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಈ ಯೋಜನೆಗಳ ಕಾಮಗಾರಿಗಳನ್ನು ಯಾವುದೇ ವಿಳಂಬವಾಗದಂತೆ ಗಮನಹರಿಸುವ ಮೂಲಕ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಈ ವೇಳೆ ಪ್ರಮುಖವಾಗಿ ಶಿರಾಡಿ ಘಾಟ್ ಹಾಗೂ ಸುರತ್ಕಲ್ -ಬಿ.ಸಿ ರೋಡ್ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (DPR) ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಈ ಯೋಜನೆಗಳು ಜಿಲ್ಲೆಯ ರಸ್ತೆ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ, ಇವುಗಳ ಅನುಷ್ಠಾನಕ್ಕೆ ವೇಗ ನೀಡುವಂತೆಯೂ ಅಧಿಕಾರಿಗಳಿಗೆ ಸಂಸದ ಕ್ಯಾ. ಚೌಟ ಅವರು ಮನವರಿಕೆ ಮಾಡಿದ್ದಾರೆ.ಅಲ್ಲದೆ, ಮಾಣಿ -ಸಂಪಾಜೆ ನಡುವಿನ ರಸ್ತೆಯು ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವ್ಯಾಪ್ತಿಗೆ ಬಂದಿರುವುದರಿಂದ, ಅದರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಹೆಚ್ಚಿನ ಗಮನಹರಿಸುವ ಮೂಲಕ ಮರುಪರಿಶೀಲಿಸುವ ಅಗತ್ಯತೆಯನ್ನು ಸಭೆಯಲ್ಲಿ ಸಂಸದರು ಒತ್ತಿ ಹೇಳಿದರು.
ಈ ಭೇಟಿಯ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಉಪಸ್ಥಿತರಿದ್ದರು.







