ಸುಳ್ಯ:ಸುಳ್ಯದ ಮೂಲಕ ದಕ್ಷಿಣ ಕನ್ನಡ-ಕೊಡಗು ಸಂಪರ್ಕಿಸುವ ರೈಲ್ವೇ ಹಳಿ ನಿರ್ಮಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸಲು ಶಾಸಕಿ ಭಾಗೀರಥಿ ಮುರುಳ್ಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಿದ್ದಾರೆ. ಪ್ರಾದೇಶಿಕ ಸಂಪರ್ಕ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಕಾಣಿಯೂರಿನಿಂದ ಸುಳ್ಯ ಮತ್ತು ನಾಪೋಕ್ಲು ಮೂಲಕ
ಮೈಸೂರಿಗೆ ಹೊಸ ರೈಲು ಮಾರ್ಗವನ್ನು ಪ್ರಾರಂಭಿಸಲು ಮನವಿಯಲ್ಲಿ ತಿಳಿಸಲಾಗಿದೆ.ಪ್ರಸ್ತಾವಿತ ರೈಲು ಮಾರ್ಗವು ಮಂಗಳೂರು-ಹಾಸನ ರೈಲು ಮಾರ್ಗದ ಕಾಣಿಯೂರಿನಿಂದ ಆರಂಭಿಸಿ ಸುಳ್ಯ, ನಾಪೊಕ್ಲು ಮೂಲಕ ಮೈಸೂರು- ಕುಶಾಲನಗರ ರೈಲ್ವೇ ಲೈನ್ಗೆ ಸಂಪರ್ಕ ಕಲ್ಪಿಸುವುದಾಗಿದೆ. ಕಾಣಿಯೂರು-ಕಾಞಂಗಾಡ್ ರೈಲು ಮಾರ್ಗಕ್ಕೆ ಈ ಹಿಂದೆ ಪ್ರಸ್ತಾಪಿಸಲಾದ ಜಂಕ್ಷನ್ ಪಾಯಿಂಟ್ ಕೂಡ ಕಾಣಿಯೂರು ಆಗಿತ್ತು.
ಇದರಿಂದಾಗಿ ಮೈಸೂರು ಮತ್ತು ಮುಂದಿನ ಸ್ಥಳಗಳಿಗೆ ಸುಗಮ ರೈಲು ಸಂಪರ್ಕವನ್ನು ಒದಗಿಸುತ್ತದೆ. ಪ್ರಮುಖ ತಾಲೂಕಾಗಿದ್ದರೂ ಯಾವುದೇ ರೈಲ್ವೆ ಹಳಿ ಅಥವಾ ರೈಲು ನಿಲ್ದಾಣವು ಸುಳ್ಯ ತಾಲೂಕಿನಲ್ಲಿ ಇಲ್ಲ. ಆದ್ದರಿಂದ ಪ್ರಸ್ತಾವಿತ ಜೋಡಣೆಯು ಸಂಪರ್ಕ ಸಮಸ್ಯೆ ಇರುವ ಸುಳ್ಯ, ಕೊಡಗು ಪ್ರದೇಶಗಳಿಗೆ ಅನುಕೂಲ ಆಗಲಿದೆ, ಪ್ರವಾಸೋದ್ಯಮ ಬೆಳವಣಿಗೆಗೂ ಪೂರಕವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸುಳ್ಯದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕರು ಮನವಿಯನ್ನು ಸಂಸದರಿಗೆ ಸಲ್ಲಿಸಿದ್ದಾರೆ.
















