ಮಂಗಳೂರು: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ವತಿಯಿಂದ ದ.ಕ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಮಾ. 26ರಿಂದ 28ರವರೆಗೆ ನಡೆಯಲಿದೆ ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಹೇಳಿದರು.ಮಂಗಳೂರಿನಲ್ಲಿ ನಡೆದ
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು 26 ರಂದು ಸಂಜೆ 4 ಕ್ಕೆ ಕನ್ನಡ ಸಾಂಸ್ಕೃತಿಕ ದಿಬ್ಬಣವನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕರಾಂ ಪೂಜಾರಿ ಉದ್ಘಾಟಿಸಲಿದ್ದಾರೆ.3 ದಿನ ಪರ್ಯಂತ ನಡೆಯಲಿರುವ ಸಮ್ಮೇಳನದಲ್ಲಿ ವಿಚಾರಗೋಷ್ಠಿಗಳು, ಕವಿಗೋಷ್ಠಿ ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಷ್ಟೇ ಅಲ್ಲದೆ ಪುಸ್ತಕ ಮಳಿಗೆಗಳು, ಕರಾವಳಿಯ ಆಕರ್ಷಕ ವಸ್ತು ಸಂಗ್ರಹ ಪ್ರದರ್ಶನ, ಗುಡಿ ಕೈಗಾರಿಕೆ, ಆಹಾರ ಸಹಿತ ವಿವಿಧ ಮೇಳಗಳು, ಪಟ್ಟಾಂಗ ಕಟ್ಟೆಯಲ್ಲಿ ಅಜ್ಜಿ ಕಥೆ, ಉತ್ತರ ಹೇಳಿ ಪುಸ್ತಕ ಗೆಲ್ಲಿ ಇಂತಹ ನವೀನ ಶೈಲಿಯ ಕಾರ್ಯಕ್ರಮಗಳು ಇರಲಿದೆ
ಎಂದರು.ಮಾ.27ರಂದು ಬೆಳಿಗ್ಗೆ 9.45ಕ್ಕೆ ಸಮ್ಮೇಳನವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಸಮ್ಮೇಳನಾಧ್ಯಕ್ಷತೆ ವಹಿಸುವರು.ಸ್ಪೀಕರ್ ಯು.ಟಿ.ಖಾದರ್, ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಮತ್ತಿತರರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಧಾನ ಕಾರ್ಯದರ್ಶಿ ವಿನಯ್ ಆಚಾರ್ಯ, 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಸಂಚಾಲಕ ವಿಶ್ವನಾಥ್ ಬಂಟ್ವಾಳ ಮತ್ತಿತ್ತರರು ಉಪಸ್ಥಿತರಿದ್ದರು.














