ಮಂಗಳೂರು: ಜನರ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ಹೊಸ ಸರ್ಕಾರ ಜಾರಿಗೊಳಿಸುತ್ತಿರುವ ನೂತನ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಾಮಾಣಿಕ ಕೆಲಸವನ್ನು ಅಧಿಕಾರಿಗಳು ಮಾಡುವ ಮೂಲಕ ಕರ್ತವ್ಯದಲ್ಲಿನ ತಮ್ಮ ಕಾರ್ಯ ದಕ್ಷತೆಯನ್ನು ತೋರಬೇಕು, ಉದಾಸೀನ ಮನೋಭಾವ ಸಹಿಸುವುದಿಲ್ಲ, ಪ್ರತಿಯೊಬ್ಬ ಅಧಿಕಾರಿ ಮನಸ್ಸು ಮಾಡಿದರೆ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಅಗಾಧ ಬದಲಾವಣೆ ತರಬಹುದು, ಅಂತಹ ಅಧಿಕಾರಿಗಳಿಗೆ ಸರ್ಕಾರ ಸದಾ
ಬೆಂಬಲ ನೀಡುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಹೇಳಿದರು. ಅವರು ಜೂ. 11ರಂದು ಸಂಜೆ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಅನೌಪಾಚಾರಿಕ ಸಭೆಯಲ್ಲಿ ಮಾತನಾಡಿದರು.
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ, ಅದು ಜನಸಾಮಾನ್ಯರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ, ಅದನ್ನು ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಕೆಲಸವಾಗಬೇಕು, ಇದೊಂದು ಅನೌಪಚಾರಿಕ ಸಭೆಯಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಕೆಡಿಪಿ ಸಭೆ ನಡೆಸಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಆಳವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು, ಅಲ್ಲದೆ ಮಂಗಳೂರು ಮಹಾನಗರ ಪಾಲಿಕೆ ಸಭೆಯನ್ನು ಕೂಡ ಪ್ರತ್ಯೇಕವಾಗಿ ನಡೆಸುವುದಾಗಿ ತಿಳಿಸಿದ ಅವರು, ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೀಗ ಮುಂಗಾರು ಪ್ರಾರಂಭಗೊಂಡಿದೆ, ಯಾವುದೇ ರೀತಿಯ ಪ್ರಾಕೃತಿಕ ವಿಕೋಪಗಳು ಆಗದಂತೆ ಜಿಲ್ಲಾಡಳಿತ ಕಟ್ಟಿಚರ ವಹಿಸಬೇಕು, ಅದೇ ರೀತಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು, ವಿಕೋಪಗಳಿಂದಾಗುವ ಭೂಕುಸಿತ, ಸಾರ್ವಜನಿಕ ಆಸ್ತಿಪಾಸ್ತಿಯ ಹಾನಿ, ವಿದ್ಯುತ್ ಪೂರೈಕೆಯ ಅಡಚಣೆ ಸೇರಿದಂತೆ ವಿದ್ಯುತ್ ಕಂಬಗಳು ಬೀಳುವುದು, ರಸ್ತೆ ತುಂಡಾಗುವುದು, ಮರ ಬಿದ್ದು ರಸ್ತೆ ಸಂಪರ್ಕ ಕಡಿತವಾಗುವುದು ಸೇರಿದಂತೆ ಈ ಎಲ್ಲಾ ಸಮಸ್ಯೆಗಳನ್ನು ಕೂಡಲೇ ನಿಭಾಯಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಸಂಚಾರ, ಸರಾಗ ನೀರು ಹರಿಯುವಿಕೆಯನ್ನು ಅಧಿಕಾರಿಗಳು ಖಾತ್ರಿ ಪಡಿಸಬೇಕು, ಜಿಲ್ಲೆಯಲ್ಲಿ ಕುಡಿಯುವ ನೀರು ಇಲ್ಲದೆಡೆ ಟ್ಯಾಂಕರ್ ಮೂಲಕ ಪೂರೈಸುವ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದ ಅವರು ಮೆಸ್ಕಾಂನಿಂದ ಯಾವುದೇ ಹಾನಿ ಸಂಭವಿಸಿದಂತೆ ಅತ್ಯಂತ ಎಚ್ಚರ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗೆ ತಾಕೀತು ಮಾಡಿದರು.
ದಕ್ಷಿಣ ಕನ್ನಡ ಸೂಕ್ಷ್ಮ ಜಿಲ್ಲೆ. ಧರ್ಮ- ಜಾತಿಯ ಹೆಸರಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಂತೆ ಮುನ್ನೆಚ್ಚರಿಕೆ ವಹಿಸಬೇಕು, ಅಂತಯೇ ನೈತಿಕ ಪೊಲೀಸ್ ಗಿರಿಯನ್ನು, ಬ್ಲಾಕ್ ಮೇಲ್ ಇತರೆ ಚಟುವಟಿಕೆಗಳನ್ನು ಹತ್ತಿಕ್ಕಲು ನಿಷ್ಪಕ್ಷಪಾತವಾಗಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದರು.
ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್,ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲ್ ದೀಪ್ ಕುಮಾರ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಶ್ಸು ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚನ್ನಬಸಪ್ಪ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.